ಅಮೆರಿಕದ ಮೃಗಾಲಯದಲ್ಲಿ ಅಪರೂಪದ ಜಿರಾಫೆ ಜನನ

ನ್ಯೂಯಾರ್ಕ್,ಅ.೨೨-ಅಮೆರಿಕದ ಟೆನ್ನೆಸ್ಸಿಯಲ್ಲಿರುವ ಬ್ರೈಟ್ಸ್ ಮೃಗಾಲಯದಲ್ಲಿ ಅಪರೂಪದ ಜಿರಾಫೆಯೊಂದು ಜನಿಸಿದೆ. ಜಿರಾಫೆಯೊಂದು ಪುಟಾಣಿ ಹೆಣ್ಣು ಮರಿ ಜಿರಾಫೆಗೆ ಜನ್ಮ ನೀಡಿತ್ತು. ತಾಯಿ ಜಿರಾಫೆ ಮಗುವಿನ ದೇಹಕ್ಕೆ ನಾಲಿಗೆಯಿಂದ ಸ್ಪರ್ಶಿಸಿ ತಾಯಿ ಮಮತೆ ತೋರುತ್ತಿದೆ.
ಸಾಮಾನ್ಯವಾಗಿ ಜಿರಾಫೆ ದೇಹದ ತುಂಬಾ ಆಕರ್ಷಕ ಕಂದು ಬಣ್ಣದ ದೊಡ್ಡ ಗಾತ್ರದ ಚುಕ್ಕೆಗಳನ್ನು ಕಾಣುತ್ತೇವೆ ಆದರೆ ಈ ಜಿರಾಫೆಯು ತನ್ನ ದೇಹದಲ್ಲಿ ಒಂದೇ ಒಂದು ಕಲೆಗಳಿಲ್ಲದೆ ಜನಿಸಿರುವುದು ಜಗತ್ತಿನಲ್ಲಿ ಇದೇ ಮೊದಲು ಎಂದು ಅಧಿಕಾರಿಗಳು ಹೇಳುತ್ತಾರೆ.
ಜುಲೈ ೩೧ ರಂದು ಜನಿಸಿದ ಜಿರಾಫೆಗೆ ಇನ್ನೂ ಹೆಸರಿಡಲಾಗಿಲ್ಲ. ಇಡೀ ದೇಹ ಕಂದು ಬಣ್ಣದಲ್ಲಿರುವ ಈ ಹೆಣ್ಣು ಜಿರಾಫೆಯ ದೇಹದಲ್ಲಿ ಕಲೆಗಳು ಇಲ್ಲದಿರುವುದು ಅಚ್ಚರಿ ಮೂಡಿಸಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಭೂಮಿಯಲ್ಲಿ ಇಂತಹ ಜಿರಾಫೆ ಇನ್ನೊಂದಿಲ್ಲ ಎಂದು ಹೇಳಲಾಗುತ್ತದೆ. ಸದ್ಯ ಈ ಜಿರಾಫೆ ಆರು ಅಡಿ ಎತ್ತರವಿದೆ. ಪ್ರಸ್ತುತ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದೆ.
೨೦೧೮ ರಲ್ಲಿ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ಸ್ ರೆಡ್ ಲಿಸ್ಟ್ ಅನ್ನು ಉಲ್ಲೇಖಿಸಿ, ಯುಎಸ್‌ಎ ಟುಡೆ ಇದು ರೆಟಿಕ್ಯುಲೇಟೆಡ್ ಜಿರಾಫೆ ಮತ್ತು ಅಳಿವಿನಂಚಿನಲ್ಲಿರುವ ಜಾತಿಗೆ ಸೇರಿದೆ ಎಂದು ಹೇಳಿದೆ. ಜಿರಾಫೆಗಳು ವೇಗವಾಗಿ ಕಣ್ಮರೆಯಾಗುತ್ತಿದ್ದು, ಕಳೆದ ಮೂರು ದಶಕಗಳಲ್ಲಿ ಶೇ.೪೦ರಷ್ಟು ಜಿರಾಫೆಗಳು ಕಣ್ಮರೆಯಾಗಿವೆ ಎಂದು ಬ್ರೈಟ್ಸ್ ಮೃಗಾಲಯದ ಸಂಸ್ಥಾಪಕ ಟೋನಿ ಬ್ರೈಟ್ ಹೇಳಿದ್ದಾರೆ. ಹೆಣ್ಣು ಜಿರಾಫೆಗಳು ೧೭ ಅಡಿ ಎತ್ತರಕ್ಕೆ ಬೆಳೆಯುತ್ತವೆ. ಇದರ ತೂಕ ಸುಮಾರು ೧,೧೭೯ ಕೆ.ಜಿ. ಇದೆ ಎನ್ನಲಾಗಿದೆ.