ಅಮೆರಿಕದಲ್ಲೂ ಟಿಕ್ ಟಾಕ್ ನಿಷೇಧ

ವಾಷಿಂಗ್ಟನ್, ಆ. ೧- ಕೊರೊನಾ ಸೋಂಕು ಕಾಣಿಸಿಕೊಂಡ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಚೀನಾ ಮೂಲದ ಟಿಕ್‌ಟಾಕ್ ಆಪ್ ನಿಷೇಧಿಸಿದ ನಂತರ ಇದೀಗ ಅಮೆರಿಕದಲ್ಲೂ ಸಂಪೂರ್ಣ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ.
ಅಮೆರಿಕಾದಾದ್ಯಂತ ಟಿಕ್‌ಟಾಕ್ ಆಪ್‌ಗೆ ನಿಷೇಧ ಹೇರುವ ಜತೆಗೆ ಪ್ಲೇ ಸ್ಟೋರ್ ಸೇರಿದಂತೆ ಯಾವುದೇ ಗೂಗಲ್ ಪ್ಲೇ ಸ್ಟೋರ್‌ಗಳಲ್ಲಿ ಸಿಗದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ತಿಳಿಸಿದ್ದಾರೆ.
ಫ್ಲಾರಿಡಾದಿಂದ ಏರ್‌ಫೋರ್ಸ್-೧ ವಿಮಾನದಲ್ಲಿ ವಾಷಿಂಗ್ಟನ್‌ಗೆ ಹಿಂದಿರುಗುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕದಾದ್ಯಂತ ಟಿಕ್‌ಟಾಕ್‌ನ್ನು ನಿಷೇಧಿಸುವ ನಿಟ್ಟಿನಲ್ಲಿ ಗಂಭೀರ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ.
ಟಿಕ್‌ಟಾಕ್ ಆಪ್ ಬಗ್ಗೆ ಅಮೆರಿಕದ ಸಂಸದರು ವಿಷಯ ಪ್ರಸ್ತಾಪ ಮಾಡಿದ್ದು, ಈ ಆಪ್‌ಗಳು ಮಾಹಿತಿಯನ್ನು ಕದಿಯುವ ಮತ್ತು ಖಾಸಗಿತನಕ್ಕೆ ಧಕ್ಕೆತರುವ ಸಾಧ್ಯತೆಗಳಿವೆ. ಹೀಗಾಗಿ, ಚೀನಾದ ಈ ಆಪ್‌ನ್ನು ಸಂಪೂರ್ಣವಾಗಿ ಅಮೆರಿಕದಲ್ಲಿ ನಿಷೇಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಚೀನಾಕ್ಕೆ ಟೆನ್‌ಷನ್
ಅಮೆರಿಕಾದಾದ್ಯಂತ ಟಿಕ್‌ಟಾಕ್ ಆಪ್‌ನ್ನು ನಿಷೇಧಿಸಲು ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ನಿರ್ಧಾರದಿಂದ ಚೀನಾಗೆ ಟೆನ್‌ಷನ್ ಆರಂಭವಾಗಿದೆ.
ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ದಿನದಿಂದ ದಿನಕ್ಕೆ ಜಗತ್ತಿನ ಒಂದೊಂದೇ ದೇಶಗಳು ಟಿಕ್‌ಟಾಕ್ ಆಪ್‌ಗಳನ್ನು ನಿಷೇಧಿಸುತ್ತಿವೆ. ಅದರಲ್ಲೂ ಭಾರತ, ಅಮೆರಿಕಾ ಸೇರಿದಂತೆ ಪ್ರಮುಖ ದೇಶಗಳು ಟಿಕ್‌ಟಾಕ್ ನಿಷೇಧಿಸುತ್ತಿರುವುದರಿಂದ ಚೀನಾಕ್ಕೆ ಭಾರಿ ಹೊಡೆತ ಬಿದ್ದಿದೆ.
ಅಮೆರಿಕದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಸಮಿತಿ ಟಿಕ್‌ಟಾಕ್ ಆಪ್ ನಿಷೇಧಿಸುವ ಸಂಬಂಧ ಗಂಭೀರ ಚಿಂತನೆ ನಡೆಸಿದೆ. ಇದರಿಂದಾಗಿ ಭವಿಷ್ಯದಲ್ಲಿ ಸದ್ಯದಲ್ಲೇ ಅಮೆರಿಕದಲ್ಲೂ ಟಿಕ್‌ಟಾಕ್ ಆಪ್ ನಿಷೇಧ ಹೇರುವ ಕಾಲ ದೂರವಿಲ್ಲ.

ಇತರ ವಸ್ತುಗಳಿಗೂ ನಿಷೇಧ: ಟಿಕ್‌ಟಾಕ್ ಸೇರಿದಂತೆ ಚೀನಾದ ಇತರೆ ವಸ್ತುಗಳಿಗೂ ಅಮೆರಿಕದಲ್ಲಿ ನಿಷೇಧ ಹೇರುವ ಚಿಂತನೆ ನಡೆಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟಿಕ್‌ಟಾಕ್‌ಗೆ ಸಂಬಂಧಿಸಿದಂತೆ ನಮ್ಮ ಮುಂದೆ ಸಾಕಷ್ಟು ಪರ್ಯಾಯ ಆಯ್ಕೆಗಳಿವೆ. ಅವುಗಳ ಬಗ್ಗೆಯೂ ನಾವು ಚಿಂತನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆಪ್ ಬಳಕೆದಾರರ ಮಾಹಿತಿ ನಿರ್ವಹಣೆ ಮತ್ತು ರಾಷ್ಟ್ರೀಯ ಭದ್ರತೆ ಬಗ್ಗೆ ಕಳೆದ ತಿಂಗಳು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ಪಾಂಪಿಯೊ ಟಿಕ್‌ಟಾಕ್ ನಿಷೇಧಿಸುವ ಸುಳಿವು ನೀಡಿದ್ದರು. ಭಾರತ ಈಗಾಗಲೇ ಟಿಕ್‌ಟಾಕ್, ವಿ -ಚಾಟ್ ಸೇರಿದಂತೆ ೫೯ ಆಪ್‌ಗಳನ್ನು ನಿಷೇಧಿಸಿದೆ.