ಅಮೆರಿಕದಲ್ಲಿ ಹೊಸಪ್ರಯಾಣ ನಿಯಮ ಜಾರಿ

ವಾಷಿಂಗ್ಟನ್, ಡಿ.೩- ಅಮೆರಿಕಾದಲ್ಲಿ ಈಗಾಗಲೇ ಒಮಿಕ್ರಾನ್‌ನ ಕೆಲವು ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಜೋ ಬೈಡೆನ್ ತನ್ನ ಹೊಸ ಪ್ರಯಾಣ ನಿಯಮಗಳನ್ನು ಜಾರಿ ತಂದಿದ್ದಾರೆ.
ಅಮೆರಿಕಾದ ಕ್ಯಾಲಿಫೋರ್ನಿಯಾ, ಕೊಲರಾಡೊ, ಮಿನ್ನೆಸೋಟ, ನ್ಯೂಯಾರ್ಕ್ ಹಾಗೂ ಹವಾಯಿಯಲ್ಲಿ ಈಗಾಗಲೇ ಓಮಿಕ್ರಾನ್ ಪ್ರಕರಣಗಳ ಬೆಳಕಿಗೆ ಬಂದಿದೆ. ಆದರೆ ಸೋಂಕಿಗೆ ತುತ್ತಾದವರು ಯಾರೂ ಕೂಡ ಪ್ರಯಾಣದ ಇತಿಹಾಸ ಹೊಂದಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿರುವುದು ಸಹಜವಾಗಿಯೇ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ವಿಶ್ವಾದ್ಯಂತ ಈಗಾಗಲೇ ೩೦ ದೇಶಗಳಲ್ಲಿ ಒಮಿಕ್ರಾನ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಇದೀಗ ಹೊಸದಾಗಿ ಪ್ರಯಾಣ ನಿಯಮ ಜಾರಿಗೆ ತರಲಾಗಿದೆ. ಇನ್ನು ತನ್ನ ಹೊಸ ಪ್ರಯಾಣ ನಿಯಮದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೈಡೆನ್, ದೇಶದಲ್ಲಿ ಲಾಕ್‌ಡೌನ್ ನಡೆಸುವ ಇರಾದೆಯಿಲ್ಲ. ಅಲ್ಲದೆ ವ್ಯಾಕ್ಸಿನ್ ಕುರಿತಾದ ಯಾವುದೇ ಆದೇಶ ಹೊರಡಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಬೈಡೆನ್ ತಂದಿರುವ ಹೊಸ ನಿಯಮದ ಪ್ರಕಾರ, ಯಾವುದೇ ವ್ಯಾಕ್ಸಿನ್ ಪಡೆದುಕೊಂಡಿದ್ದರೂ ಅಮೆರಿಕಾ ತೆರಳುವ ೨೪ ಗಂಟೆಗಳ ಮುನ್ನ ಕೋವಿಡ್ ಪರೀಕ್ಷೆ ಮಾಡಬೇಕು. ವಿಮಾನಗಳು, ರೈಲು ಮತ್ತು ಬಸ್‌ಗಳಲ್ಲಿ ಮಾಸ್ಕ್ ಅವಶ್ಯಕತೆಗಳನ್ನು ಮಾರ್ಚ್ ವರೆಗೆ ವಿಸ್ತರಿಸಲಾಗುವುದು. ಅಮೆರಿಕಾ ಸರ್ಕಾರದ ವ್ಯಾಪ್ತಿ ಹೊಂದಿರುವವರಿಗೆ ಖಾಸಗಿ ವಿಮಾ ಕಂಪನಿಗಳ ಮೂಲಕ ಮತ್ತು ಇಲ್ಲದವರಿಗೆ ಆರೋಗ್ಯ ಕೇಂದ್ರಗಳು ಮತ್ತು ಗ್ರಾಮೀಣ ಚಿಕಿತ್ಸಾಲಯಗಳ ಮೂಲಕ ಉಚಿತವಾಗಿ
ಮನೆಯಲ್ಲಿಯೇ ಪರೀಕ್ಷೆಗಳನ್ನು ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಲಾಗುತ್ತದೆ ಸೇರಿದಂತೆ ಹಲವು ವಿಚಾರಗಳನ್ನು ನಿಯಮಗಳಲ್ಲಿ ಸೇರ್ಪಡೆಗೊಳಿಸಲಾಗಿದೆ.