ಅಮೆರಿಕದಲ್ಲಿ ಶೂಟೌಟ್: ನಾಲ್ವರು ಸಿಖ್‌ರು ಸೇರಿ ೮ ಮಂದಿ ಸಾವು

ನ್ಯೂಯಾರ್ಕ್, ಏ.೧೭: ಅಮೆರಿಕದ ಇಂಡಿಯಾನಾ ಪ್ರಾಂತ್ಯದ ಇಂಡಿಯಾನಾ ಪೊಲೀಸ್ ನಗರದಲ್ಲಿ ತಡರಾತ್ರಿ ನಡೆದ ಶೂಟೌಟ್‌ನಲ್ಲಿ ಭಾರತೀಯ ಮೂಲದ ನಾಲ್ವರು ಸಿಖ್ ರು ಸೇರಿದಂತೆ ಎಂಟು ಮಂದಿ ಅಸುನೀಗಿದ್ದಾರೆ.
ಇಂಡಿಯಾನಾ ಪೊಲೀಸ್ ಮೆಟ್ರೋಪಾಲಿಟನ್, ಅಸುನೀಗಿದ ಭಾರತೀಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅಮರ್ ಜೀತ್ ಜೋಹಾಲ್ (೬೬), ಜಸ್ವಿಂದರ್ ಕೌರ್ (೬೪), ಅಮರ್ಜಿತ್ ಸ್ಖೋನ್ (೪೮) ಮತ್ತು ಜಸ್ವಿಂದರ್ ಸಿಂಗ್ (೬೮)ಸೇರಿದ್ದು, ಈ ಪೈಕಿ ಮೊದಲ ಮೂವರು ಸಿಖ್ ಮಹಿಳೆಯರಾಗಿದ್ದಾರೆ.
ಈ ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿಯೇ ಇರುವ ಫೆಡ್‌ಎಕ್ಸ್ ಕಂಪನಿಯ ಆವರಣದಲ್ಲಿ ಗುಂಡಿನ ಚಕಮಕಿ ನಡೆದಿದೆ. ಶೂಟರ್ ಅನ್ನು ೧೯ ವರ್ಷದ ಬ್ರಾಂಡನ್ ಹೋಲ್ ಎಂದು ಗುರುತಿಸಿದ್ದು, ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಯಾವ ಕಾರಣಕ್ಕಾಗಿ ಈ ಗುಂಡಿನ ದಾಳಿ ನಡೆದಿದೆ ಎನ್ನುವುದನ್ನು ಅಮೆರಿಕನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಂಡಿಯಾನಾ ಪೊಲಿಸ್ ಒಂದರಲ್ಲೇ ಈ ವರ್ಷ ಕನಿಷ್ಠ ಮೂರನೇ ಸಾಮೂಹಿಕ ಶೂಟೌಟ್ ಇದಾಗಿದೆ. ಘಟನೆಗೆ ಕುರಿತಂತೆ ಭಾರತೀಯ ರಾಯಭಾರಿ ಕಚೇರಿ ತೀವ್ರ ಆತಂಕ ವ್ಯಕ್ತಪಡಿಸಿದೆ. ಘಟನೆ ಸಂಬಂಧ ತೀವ್ರ ತನಿಖೆಗೊಳಪಡಿಸಬೇಕು. ಜೊತೆಗೆ ಸಿಖ್ ಸಮುದಾಯದ ಮೃತರ ಸಂಬಂಧ ಭಾರತ ಎಲ್ಲ ರೀತಿಯ ನೆರವು ನೀಡಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.