ಅಮೆರಿಕದಲ್ಲಿ ಪೋಲಿಯೋ ಪತ್ತೆ

ನ್ಯೂಯಾರ್ಕ್, ಜು.೨೨- ಜಗತ್ತಿನಲ್ಲಿ ಪಾಕಿಸ್ತಾನ, ಅಪ್ಘಾನಿಸ್ತಾನ ಹೊರತುಪಡಿಸಿ ಬಹುತೇಕ ವಿಶ್ವದ ಎಲ್ಲಾ ಭಾಗಗಳಿಂದಲೂ ಪೋಲಿಯೋ ಪ್ರಕರಣ ಕಣ್ಮರೆಯಾಗಿದೆ. ಆದರೆ ಇದೀಗ ಬಹುತೇಕ ದಶಕದ ಬಳಿಕ ಅಮೆರಿಕಾದಲ್ಲಿ ಪೋಲಿಯೋ ಪ್ರಕರಣ ಕಾಣಿಸಿಕೊಂಡಿದ್ದು, ಅಚ್ಚರಿಗೆ ಕಾರಣವಾಗಿದೆ.
ವಿಶ್ವದಲ್ಲೇ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಅಮೆರಿಕಾದಲ್ಲಿ ೨೦೧೩ರಲ್ಲಿ ಕೊನೆಯ ಬಾರಿಗೆ ಪೋಲಿಯೋ ಪ್ರಕರಣ ಕಾಣಿಸಿಕೊಂಡಿತ್ತು. ಇದೀಗ ಬಹುತೇಕ ದಶಕಗಳ ಬಳಿಕ ಮ್ಯಾನ್‌ಹ್ಯಾಟನ್ ಹೊರವಲಯದ ರೊಕ್‌ಲ್ಯಾಂಡ್‌ನ ವ್ಯಕ್ತಿಯಲ್ಲಿ ಪೋಲಿಯೋ ಪ್ರಕರಣ ಕಾಣಿಸಿಕೊಂಡಿದೆ. ಇತ್ತೀಚಿನ ಪ್ರಕರಣವು “ಓರಲ್ ಪೋಲಿಯೊ ಲಸಿಕೆ (ಒಪಿವಿ) ಪಡೆದ ವ್ಯಕ್ತಿಯಿಂದ ಪ್ರಸರಣ ಸರಪಳಿಯ ಸೂಚಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಯಿ ಮೂಲಕ ಪಡೆಯುವ ಲಸಿಕೆಯನ್ನು ಅಮೆರಿಕಾದಲ್ಲಿ ೨೦೦೦ರಲ್ಲೇ ನಿಲ್ಲಿಸಲಾಗಿತ್ತು. ಅಲ್ಲದೆ ನಿಷ್ಕ್ರಿಯಗೊಂಡ ಲಸಿಕೆಗಳಿಂದ ರಿವರ್ಟೆಂಟ್ ಸ್ಟ್ರೈನ್‌ಗಳು ಹೊರಹೊಮ್ಮಲು ಸಾಧ್ಯವಿಲ್ಲದ ಕಾರಣ, ಒಪಿವಿ ಅನ್ನು ನಿರ್ವಹಿಸುವ ಯುಎಸ್‌ನ ಹೊರಗಿನ ಸ್ಥಳದಲ್ಲಿ ವೈರಸ್ ಹುಟ್ಟಿಕೊಂಡಿರಬಹುದು ಎಂದು ಇದು ಸೂಚಿಸುತ್ತದೆ ಎಂದು ನ್ಯೂಯಾರ್ಕ್‌ನ ಆರೋಗ್ಯ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನುಳಿದಂತೆ ಪಾಕಿಸ್ತಾನ, ಅಫ್ಗಾನಿಸ್ತಾನದಲ್ಲಿ ಪೋಲಿಯೋ ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದು ಕೂಡ ಆತಂಕಕಾರಿ ಸಂಗತಿ. ಪಾಕಿಸ್ತಾನದಲ್ಲಿ ಪೋಲಿಯೋ ಲಸಿಕೆ ನೀಡುವ ಆರೋಗ್ಯ ಕಾರ್ಯಕರ್ತರನ್ನೇ ಉಗ್ರರು ಗುಂಡಿಕ್ಕಿ ಹತ್ಯೆ ನಡೆಸುತ್ತಿದ್ದು, ಇದರಿಂದ ಅಲ್ಲಿ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ.