ಅಮೆರಿಕದಲ್ಲಿ ಚಳಿಗೆ ೯೦ ಮಂದಿ ಬಲಿ

ನ್ಯೂಯಾರ್ಕ್, ಜ.೨೨- ಹವಾಮಾನ ವೈಪರಿತ್ಯದ ಪರಿಣಾಮ ಜಾಗತಿಕ ಮಟ್ಟದಲ್ಲಿ ಯಾವ ರೀತಿ ದುಷ್ಪರಿಣಾಮ ಬೀರುತ್ತಿದೆ ಎಂದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಈ ನಡುವೆ ಅಮೆರಿಕಾದಲ್ಲಿ ಇದಕ್ಕೆ ಸಂಬಂಧಿಸಿದ ಮತ್ತೊಂದು ಅನಾಹುತ ಬೆಳಕಿಗೆ ಬಂದಿದೆ. ಕಳೆದ ಒಂದು ವಾರದಿಂದ ಅಮೆರಿಕಾದಲ್ಲಿ ಕಂಡುಕೇಳರಿಯದ ಶೀತ ವಾತಾವರಣದ ಪರಿಣಾಮ ೯೦ಕ್ಕೂ ಅಧಿಕ ಹವಾಮಾನ ಸಂಬಂಧಿತ ಸಾವುಗಳು ದಾಖಲಾಗಿವೆ.
ಟೆನ್ನೆಸ್ಸಿ ಹಾಗೂ ಒರೆಗಾನ್‌ನಲ್ಲಿ ಪರಿಸ್ಥಿತಿ ತೀವ್ರ ಭೀಕರ ಸ್ಥಿತಿಯಲ್ಲಿದ್ದು, ತುರ್ತು ಪರಿಸ್ಥಿತಿ ಇದೆ. ಇಲ್ಲಿ ಕ್ರಮಾವಾಗಿ ಕನಿಷ್ಠ ೨೫ ಹಾಗೂ ೧೬ ಮಂದಿ ಮೃತಪಟ್ಟಿದ್ದಾರೆ. ಟೆನ್ನೆಸ್ಸೀ ಮತ್ತು ಒರೆಗಾನ್‌ನಲ್ಲಿ ಸಾವಿನ ಸಂಖ್ಯೆ ಹೆಚ್ಚಿದ್ದರೆ, ಇಲಿನಾಯ್ಸ್, ಪೆನ್ಸಿಲ್ವೇನಿಯಾ, ಮಿಸ್ಸಿಸ್ಸಿಪ್ಪಿ, ವಾಷಿಂಗ್ಟನ್, ಕೆಂಟುಕಿ, ವಿಸ್ಕಾನ್ಸಿನ್, ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಇತರೆಡೆಗಳಲ್ಲಿ ಕೂಡ ಸಾವು-ನೋವುಗಳು ವರದಿಯಾಗಿವೆ. ಸದ್ಯ ಅಮೆರಿಕಾದಾದ್ಯಂತ ಸಾವಿರಕ್ಕೂ ಅಧಿಕ ಮಂದಿ ವಿದ್ಯುತ್ ವ್ಯತ್ಯಯದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯದ ಶೀತ ಪರಿಸ್ಥಿತಿ ಮತ್ತೆ ೨-೪ ದಿನ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಲ್ಲಿ ಪ್ರಬಲವಾದ ಗಾಳಿಯಿಂದಾಗಿ ವಿದ್ಯುತ್ ತಂತಿಯೊಂದು ವಾಹನಕ್ಕೆ ಬಡಿದಾಗ ಮೂವರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದರು. ವಾಹನದಲ್ಲಿದ್ದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಅಮೆರಿಕಾದ ದಕ್ಷಿಣ ನಗರದಲ್ಲಿನ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ಗ್ರಾಹಕರಿಗೆ ಸದ್ಯ ಬಾಟಲ್ ನೀರನ್ನೇ ನೀಡುತ್ತಿದೆ ಎಂದು ವರದಿಯಾಗಿದೆ. ದೇಶದ ಹಲವು ಕಡೆಗಳಲ್ಲಿ ಮಂಜು ಆವೃತ್ತವಾಗಿದ್ದು, ನಾಗರಿಕರು ತತ್ತರಿಸಿದ್ದಾರೆ. ಹಿಮಾವೃತ ಪರಿಸ್ಥಿತಿಗಳು ಮತ್ತು ತಣ್ಣನೆಯ ಗಾಳಿಯು ವಾರದ ಆರಂಭದವರೆಗೂ ಮುಂದುವರಿಯುವ ನಿರೀಕ್ಷೆಯಿದೆ. ಈ ನಡುವೆ ಕೆಲವು ಹವಾಮಾನಶಾಸ್ತ್ರಜ್ಞರು ಬೆಚ್ಚಗಿನ ಗಾಳಿ ಮತ್ತು ಮಳೆಯು ಮಧ್ಯಪಶ್ಚಿಮ ಮತ್ತು ಈಶಾನ್ಯ ಅಮೆರಿಕಾದ ಭಾಗಗಳಲ್ಲಿ ಪ್ರವಾಹವನ್ನು ಉಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ.