ಅಮೆರಿಕದಲ್ಲಿ ಒಂದೇ ದಿನದಲ್ಲಿ ೯೪೦೦೦ ಮಂದಿಗೆ ಸೋಂಕು

ವಾಷಿಂಗ್ಟನ್, ಅ. ೩೧- ಅಮೆರಿಕಾದಲ್ಲಿ ಕೊರೊನಾ ಮಹಾಮಾರಿಯ ಅಬ್ಬರ ಮುಂದುವರೆದಿದ್ದು ನಿನ್ನೆ ಒಂದೇ ದಿನ ೯೪೦೦೦ ಹೊಸ ಪ್ರಕರಣಗಳು ಪತ್ತೆ ಯಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ ೯ ದಶಲಕ್ಷ ದಾಟಿದೆ.
ಅಕ್ಟೋಬರ್ ತಿಂಗಳ ಮಧ್ಯಂತರ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದುವರೆಗೂ ದಾಖಲಾಗಿರುವ ಸೋಂಕಿತರ ಸಂಖ್ಯೆ ೯೦,೩೪,೨೯೫ ಕ್ಕೇರಿದೆ.
ಕಳೆದೆರಡು ದಿನಗಳಿಂದ ಸೋಂಕಿತರ ಸಂಖ್ಯೆ ಏರುಮುಖದಲ್ಲಿ ಸಾಗುತ್ತಿದ್ದು ಅಮೆರಿಕದ ನೂತನ ಅಧ್ಯಕ್ಷರು ಆಯ್ಕೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಎಡೆಮಾಡಿದೆ.
ಬಾಲ್ಟಿಮೋರ್ ಸ್ಕೂಲ್ ನ ಮೂಲಗಳ ಪ್ರಕಾರ ದೇಶದಲ್ಲಿ ೯೦ ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗಿವೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ೯೪ ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು ಇದೊಂದು ದಾಖಲೆಯಾಗಿದೆ.
ಅದಕ್ಕೂ ಮುನ್ನ ಒಂದು ದಿನದ ಅವಧಿಯಲ್ಲಿ ೯೧ ಸಾವಿರದಷ್ಟು ಸೋಂಕು ಪ್ರಕರಣಗಳು ದಾಖಲಾಗಿದ್ದವು. ಮಧ್ಯ ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಆಸ್ಪತ್ರೆ ಗಳಿಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗಿದ್ದು ಆರೋಗ್ಯ ಸೌಲಭ್ಯಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ.
ಈ ತರಹದ ಅಲೆಯನ್ನು ಎದುರಿಸಲು ನಾವು ಸಿದ್ಧವಾಗಿಲ್ಲ ಎಂದು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಬ್ರೌನ್ ವಿಶ್ವವಿದ್ಯಾಲಯದ ಶಾಲೆಯ ಬೀನ್ ಆಶಿಶ್ ಜಾ ತಿಳಿಸಿದ್ದಾರೆ.
ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಆರೋಗ್ಯ ಕಾರ್ಯಕರ್ತರ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ ಎಂದು ಟೆಕ್ಸಾಸ್ ನ ಅಧಿಕಾರಿಗಳು ತಿಳಿಸಿದ್ದಾರೆ.