ಅಮೃತ ಮಹೋತ್ಸವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲಿ: ಜಹೀರಾ ನಸೀಮ್

ಬೀದರ:ಮಾ.27: 75ನೇ ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಸುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಹೀರಾ ನಸೀಮ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಮಾರ್ಚ 24ರಂದು ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಸಿಇಓ ಅವರು, 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ 75 ವಾರಗಳ ಕಾಲ ರಾಷ್ಟ್ರಾದ್ಯಂತ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯುವಂತೆ ಆಯಾ ಇಲಾಖೆಗಳ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.

ಪ್ರತಿವಾರ ಜರುಗುವ ಕಾರ್ಯಕ್ರಮದ ವರದಿಯನ್ನು ಕೇಂದ್ರಕ್ಕೆ ಈ ಡಾಕ್ಯುಮೆಂಟ್ ಮಾಡಿ ವರದಿ ನೀಡಬೇಕಾಗುತ್ತದೆ. ಆದ್ದರಿಂದ ಕಾರ್ಯಕ್ರಮ ಪೂರ್ಣಗೊಂಡ ಕೂಡಲೇ ಆಯಾ ಇಲಾಖೆಗಳು ಕಾರ್ಯಕ್ರಮದ ಸುದ್ದಿ ಮತ್ತು ಭಾವಚಿತ್ರಗಳು ಹಾಗೂ ವಿಡಿಯೋ ತುಣುಕುಗಳನ್ನು ಕಳುಹಿಸಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮವು ಇಡೀ ರಾಷ್ಟ್ರಾದ್ಯಂತ ಅಚ್ಚುಕಟ್ಟಾಗಿ ನಡೆಯಬೇಕು ಎಂಬುದು ಮಾನ್ಯ ಪ್ರಧಾನಮಂತ್ರಿಗಳ ಸೂಚನೆಯಾಗಿದೆ. ಆದ್ದರಿಂದ ಆಯಾ ಇಲಾಖೆಗಳ ಅಧಿಕಾರಿಗಳು ತಮ್ಮ ಕಚೇರಿಯ ನಿತ್ಯದ ಕೆಲಸ ಕಾರ್ಯಗಳ ಜೊತೆಗೆ ಅಮೃತ ಮಹೋತ್ಸವ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳಲು ಸಹಕರಿಸಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಯಾ ಇಲಾಖೆಗಳು ತಮ್ಮ ತಮ್ಮ ಯೋಜನೆಗಳ ಅನುಷ್ಠಾನ ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವದ ಬಗ್ಗೆ ತಿಳಿಸಬೇಕು. ವಸತಿ ನಿಲಯಗಳ ಮಕ್ಕಳಿಗೆ ಪೇಂಟಿಂಗ್, ಪ್ರಬಂಧದಂತಹ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡು ಸ್ವಾತಂತ್ರ್ಯೋತ್ಸವ ಹೋರಾಟದ ಬಗ್ಗೆ ಅವರಿಗೆ ತಿಳಿಸಬೇಕು ಎಂದರು.

ಕೋವಿಡ್-19 ಮಾರ್ಗಸೂಚಿಯನುಸಾರ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಇದೆ ವೇಳೆಯಲ್ಲಿ ಸಿಇಓ ಅವರು ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಾದ ಬಿ.ಬಾಬುರೆಡ್ಡಿ, ಗೌತಮ ಅರಳಿ, ಆರ್.ಜಿ.ನಾಡಗೀರ್, ಡಾ.ವಿ.ಜಿ.ರೆಡ್ಡಿ, ಲೀಡ್ ಬ್ಯಾಂಕಿನ ಮ್ಯಾನೇಜರ್ ಬಿ.ಎಂ.ಕಮತಗಿ ಹಾಗು ಇನ್ನೀತರ ಅಧಿಕಾರಿಗಳು ಇದ್ದರು.