ಅಮೃತ ಮಹೋತ್ಸವ ಆಚರಣೆಗೆ ಯುವಕರು ಮುಂದಾಗಲು ಅಭಿಶೇಕ ಬಾಲಾಜಿ ಕರೆ

ಕಲಬುರಗಿ:ಜು.26: ಬರುವ ಅಗಸ್ಟ್ 15 ರಂದು ಗ್ರಾಮದ ಎಲ್ಲಾ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ 75 ರ ಅಮೃತ ಮಹೋತ್ಸವ ಆಚರಣೆಗೆ ಯುವಕರು ಮುಂದಾಗಬೇಕು ಎಂದು ಕರವೇ (ಪ್ರವೀಣ್ ಶೆಟ್ಟಿ ಬಣ) ದ ಕಲ್ಯಾಣ ಕರ್ನಾಟಕ ಕಾರ್ಯಧ್ಯಕ್ಷ ಅಭಿಶೇಕ ಬಾಲಾಜಿ ಕರೆ ನೀಡಿದರು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮೆಣಸಿನಹಾಳ ತಿಮ್ಮನಗೌಡ, ಮೈಲಾರ ಮಹಾದೇವಪ್ಪ, ವೀರ ರಾಣಿ ಕಿತ್ತೂರು ಚೆನ್ನಮ್ಮ, ಒನಕೆ ಒಬ್ಬವ ಸೇರಿದಂತೆ ಅನೇಕ ಮಹನೀಯರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಮಗಾಗಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅಂಥವರು ಗಳಿಸಿಕೊಟ್ಟ 75 ನೇ ಸ್ವಾತಂತ್ರ್ಯ ಮಹೋತ್ಸವವನ್ನು ಎಲ್ಲರ ಮನೆಯ ಮೇಲೆ ಧ್ವಜಾರೋಹಣ ಮಾಡಿ ರಾಷ್ಟ್ರ ಭಕ್ತಿಗೆ ಭಾಜನರಾಗಬೇಕು ಎಂದರು.ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಹರ್ ಘರ್ ತಿರಂಗಾ ಘೋಷಣೆಯೊಂದಿಗೆ ಎಲ್ಲರ ಮನೆಯಲ್ಲಿ ಅಗಸ್ಟ್ 9 ರಿಂದ 15 ರವರೆಗೆ ಧ್ವಜ ರಾರಾಜಿಸಬೇಕು. ಇದರೊಂದಿಗೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಕತೆಯನ್ನು ತಿಳಿಸುವ ಕಾರ್ಯವಾಗಬೇಕು ಎಂದು ಅವರು ಹೇಳಿದರು.