ಅಮೃತ ಮಹೋತ್ಸವಕ್ಕೆ ಸಕಲ ಸಿದ್ಧತೆ; ಸಜ್ಜಾಗುತ್ತಿದೆ ೬ ಲಕ್ಷಕ್ಕೂ ಅಧಿಕ ಮೈಸೂರು ಪಾಕು

ದಾವಣಗೆರೆ.ಆ.೧:  ನಾಳೆ ನಗರದಲ್ಲಿ ನಡೆಯಲಿರುವ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಅಗಮಿಸುವ ಸಿದ್ದರಾಮಯ್ಯ ಅಭಿಮಾನಿಗಳಿಗಾಗಿಯೇ ಸವಿಯಲು ಆರು ಲಕ್ಷ ಮೈಸೂರು ಪಾಕ್​ ಸಿದ್ಧವಾಗುತ್ತಿದೆ.ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಬಿಚ್ಚಿಡಲು ಕೈ ಪಾಳೆಯದಿಂದ ಸಿದ್ದರಾಮಯ್ಯ ಅಮೃತ ಮಹೋತ್ಸವ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮಕ್ಕಾಗಿ ವೇದಿಕೆ ಸಜ್ಜುಗೊಳಿಸಿದೆ. ಐದಾರು ಲಕ್ಷಕ್ಕೂ ಹೆಚ್ಚು ಜನರು ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. ಹೀಗಾಗಿಯೇ ಕಾಂಗ್ರೆಸ್​ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು, ಬೆಂಬಲಿಗರು ಹಾಗೂ ಜನ ಸಾಮಾನ್ಯರಿಗೆ ಉಣ ಬಡಿಸಲು ಬಗೆ-ಬಗೆಯ ತಿಂಡಿಗಳನ್ನು ತಯಾರಿಸಲಾಗುತ್ತದೆ.
150ಕ್ಕೂ ಹೆಚ್ಚು ಬಾಣಸಿಗರು
ಬೆಂಗಳೂರಿನ ಕ್ಯಾಟರಿಂಗ್​ನವರಿಗೆ ಊಟದ ಜವಾಬ್ದಾರಿ ವಹಿಸಲಾಗಿದೆ. ನಗರದ ಹೊರವಲಯದಲ್ಲಿರುವ ಕುಂದುವಾಡ ಬಳಿಯ ಸುಷಿ ಕನ್ವೆನ್ಷನ್ ಹಾಲ್​ನಲ್ಲಿ ಆರು ಲಕ್ಷ ಮೈಸೂರು ಪಾಕ್​ ಸಿದ್ಧವಾಗುತ್ತಿವೆ. ಜುಲೈ 28ರಿಂದಲೇ ಮೈಸೂರು ಪಾಕ್​ ತಯಾರಿಸಲು 150ಕ್ಕೂ ಹೆಚ್ಚು ಬಾಣಸಿಗರು ನಿಂತಿದ್ದು, ದಿನಕ್ಕೆ ಒಂದರಿಂದ ಎರಡು ಲಕ್ಷದಷ್ಟು ಮೈಸೂರು ಪಾಕ್​ ತಯಾರಿಸಲಾಗುತ್ತಿದೆ.ಈಗಾಗಲೇ ಎರಡೂವರೆ ಲಕ್ಷ ಮೈಸೂರು ಪಾಕ್​ ಸಿದ್ಧಪಡಿಸಲಾಗಿದೆ. ತಯಾರಿದ ಮೈಸೂರು ಪಾಕ್​ಅನ್ನು ಸುರಕ್ಷಿತವಾಗಿ ರೊಟ್ಟಿನ ಬಾಕ್ಸ್​ನಲ್ಲಿ ಪ್ಯಾಕ್ ಮಾಡಿ ಇಡಲಾಗುತ್ತಿದೆ. ಮೈಸೂರು ಪಾಕ್​ ತಯಾರಿಸಲು ಒಟ್ಟು ಎರಡು ಸಾವಿರ ಲೀಟರ್ ತುಪ್ಪ, ಎರಡು ಸಾವಿರ ಲೀಟರ್ ಹಾಲು, ಎರಡು ಸಾವಿರ ಕೆಜಿ ಕಡಲೆಹಿಟ್ಟು, 4 ಸಾವಿರ ಕೆಜಿ ಸಕ್ಕರೆ ಸೇರಿದಂತೆ ವಿವಿಧ ಸಾಮಗ್ರಿಗಳ ಬಳಸಲಾಗಿದೆ ಎನ್ನುತ್ತಾರೆ ಬಾಣಸಿಗರು.ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬರುವ ಜನರಿಗೆ ಮೈಸೂರು ಪಾಕ್​ನೊಂದಿಗೆ ಬೇರೆ ಖಾದ್ಯಗಳು ಉಣ ಬಿಡಿಸಲಾಗುತ್ತಿದೆ. ಬಿಸಿ ಬೇಳೆಬಾತ್, ಪಲಾವ್, ಮೊಸರುಬಜ್ಜಿ, ಮೊಸರನ್ನ ಕೂಡ ಮಾಡಲಾಗುತ್ತದೆ. ಆಗಸ್ಟ್​ 2ರವರೆಗೂ ಆರು ಲಕ್ಷ ಮೈಸೂರು ಪಾಕ್​ ತಯಾರಿಕೆ ಪೂರ್ಣವಾಗಲಿದೆ. ನಂತರ ಬೇರೆ ಖಾದ್ಯಗಳ ತಯಾರಿಕೆಯಲ್ಲಿ ತೊಡಲಾಗುವುದು ಎಂದೂ ಬಾಣಸಿಗರು ಹೇಳುತ್ತಾರೆ.ಅಡುಗೆ ಮಾಡಲೆಂದೇ ಮೂರು ಕೋಣೆಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಆಗಸ್ಟ್​ 3ರಂದು ಒಟ್ಟಾರೆ ಬಾಣಿಸಿಗರು ಹಾಗೂ ಸಹಾಯಕರು ಸೇರಿ ಎರಡು ಸಾವಿರ ಜನರು ಅಡುಗೆ ತಯಾರಿಕೆ ಮತ್ತು ಇತರ ಕಾರ್ಯಗಳಿಗೆ ಇರುತ್ತಾರೆ. ಒಂದೊಂದು ಕಡೆ 170 ಕೌಂಟರ್​ಗಳ ಇರಲಿವೆ.ಕಾರ್ಯಕ್ರಮಕ್ಕೆ ಬರುವ ಮಹಿಳೆಯರಿಗೆ ಪ್ರತ್ಯೇಕವಾಗಿ ಊಟದ ಕೌಂಟರ್ ವ್ಯವಸ್ಥೆ ಇರುತ್ತದೆ. ಆಗಸ್ಟ್ 3ರ ಬೆಳಗ್ಗೆ 9 ಗಂಟೆಯಿಂದಲೇ ಜನರಿಗೆ ಊಟ ಪ್ರಾರಂಭವಾಗಲಿದೆ. ಸದ್ಯಕ್ಕೆ ಆರು ಲಕ್ಷ ಜನರಿಗೆಂದು ಊಟದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಬರುವ ಜನರನ್ನು ನೋಡಿಕೊಂಡು ಮತ್ತಷ್ಟು ಅಡುಗೆ ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆಯಂತೆ. ಒಟ್ಟಾರೆ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬರುವ ಜನರಿಗೆ ಭರ್ಜರಿ ಊಟದ ವ್ಯವಸ್ಥೆ ಇರಲಿದೆ.