
ಬೀದರ್: ಆ.7:ಬಿಜೆಪಿಯೊಳಗೆ ಭುಗಿಲೆದಿದ್ದ ಅಸಮಾಧಾನ ಬಹಿರಂಗವಾಗಿದೆ. ಶಾಸಕರ ನಡುವೆ ಇದ್ದ ಭಿನ್ನಾಭಿಪ್ರಾಯದ ಹೊಗೆ ಈಗ ಕಿಡಿಯಾಗಿ ಹೊತ್ತಿಕೊಂಡಿದೆ.
ನಿನ್ನೆ ನಡೆದ ಕೇಂದ್ರ ಸರ್ಕಾರದ ‘ಅಮೃತ್ ಭಾರತ್ ಸ್ಟೇಷನ್’ ಕಾರ್ಯಕ್ರಮಕ್ಕೆ ಇಬ್ಬರು ಶಾಸಕರು ಗೈರಾಗಿದ್ದು ಮುನಿಸು ಸಾರ್ವಜನಿಕವಾಗಿಯೇ ಬಹಿರಂಗಗೊಂಡಂತಾಗಿದೆ.
ಇಂದು ಪ್ರಧಾನಿ ಮೋದಿ ವರ್ಚುವಲ್ ಮೂಲಕ ಬೀದರ್ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಯೋಜನೆಗೆ ಚಾಲನೆ ನೀಡಿದ್ದು, ಈ ವೇಳೆ ಪ್ರಭು ಚೌಹಾಣ್, ಬಸವಕಲ್ಯಾಣ ಶಾಸಕ ಶರಣು ಸಲಗರ ಗೈರಾಗಿದ್ದಾರೆ. 2023 ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಭಗವಂತ ಖುಬಾ ಕೆಲಸ ಮಾಡಿದ್ದಾರೆ ಎಂದು ಪ್ರಭು ಚೌಹಾಣ್ ಬಹಿರಂಗವಾಗಿ ಆರೋಪ ಮಾಡಿದ್ದರು.
ಈ ಆರೋಪದ ನಡುವೆ ಇಂದಿನ ಕಾರ್ಯಕ್ರಮಕ್ಕೆ ಗೈರಾಗಿರುವುದು ಇಬ್ಬರ ನಡುವಿನ ವೈಮನಸ್ಸಿಗೆ ಸಾಕ್ಷಿಯಾಗಿದೆ. ಈ ನಡುವೆ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಬೇಕಿದ್ದು, ಪ್ರಭಾವಿ ನಾಯಕರ ನಡುವಿನ ಮುನಿಸು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಪಕ್ಷ ಬಲವರ್ಧನೆ ಸಮಯದಲ್ಲಿ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಸಲು ಮುಂದಾಗಬೇಕಿದ್ದ ನಾಯಕರು ಮುನಿಸಿಕೊಂಡಿರುವುದು ಜಿಲ್ಲೆಯಲ್ಲಿ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.