ಅಮೃತ್ ಆಧಾರ ಯೋಜನೆಯಡಿ ಬೀದರ್ ರೈಲ್ವೆ ನಿಲ್ದಾಣ ಆಯ್ಕೆ: ಭಗವಂತ ಖೂಬಾ

ಬೀದರ್:ಮಾ.4: ಬೀದರ್ ರೈಲ್ವೆ ನಿಲ್ದಾಣವನ್ನು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಅಮೃತ್ ಆಧಾರ ಯೋಜನೆ ಅಡಿ ಆಯ್ಕೆ ಮಾಡಲಾಗಿದ್ದು, ಇದರಿಂದ ರೈಲ್ವೆ ನಿಲ್ದಾಣದಲ್ಲಿ ತ್ರಿ ಸ್ಟಾರ್ ಹೊಟಲ್, ಶಾಪಿಂಗ್ ಮಾಲ್ ಸೇರಿದಂತೆ ಹಲವು ನವೀನ ಬದಲಾವಣೆ ಕಾಣಲಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವ ಭಗವಂತ ಖೂಬಾ ಹೇಳಿದರು.

ಇಂದು ಬೀದರ ರೈಲು ನಿಲ್ದಾಣದಲ್ಲಿ ಬೀದರ ಕಲಬುರಗಿ ಎರಡನೆ ಇಂಟರಸಿಟಿ ಡೆಮೊ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೀದರ ಕಲಬುರಗಿ ಹೊಸ ಎರಡನೆಯ ಇಂಟರಸಿಟಿ ಡೆಮೊ ರೈಲಿನಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಭಾರತ ಸರ್ಕಾರದಿಂದ ಸಿಗುವ ಎಲ್ಲಾ ಸೌಕರ್ಯಗಳನ್ನು ನನ್ನ ಕ್ಷೇತ್ರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಎರಡನೆ ರೈಲಿನಿಂದ ನಮ್ಮ ಭಾಗದ ಸಾರ್ವಜನಿಕರಿಗೆ ಅನುಕುಲವಾಗಲಿದೆ ಈ ರೈಲು ಬೀದರನಿಂದ ಬೆಳಿಗ್ಗೆ 10:35 ಗಂಟೆ ಬಿಟ್ಟು ಮಧ್ನಾಹ್ನ 1:20 ಕ್ಕೆ ಕಲಬುರಗಿ ತಲುಪಲಿದೆ ಬೀದರ, ಖಾನಾಪೂರ, ಕಣಜಿ, ಹಳ್ಳಿಖೇಡ ಬಿ, ಹುಮನಾಬಾದ, ಹಳ್ಳಖೇಡ ಕೆ, ಕಮಲಾಪೂರ, ಕುರಕೋಟ, ತಾಜ ಸುಲ್ತಾನಪುರ, ರೈಲು ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆ ಹೊಂದಿದೆ ಎಂದರು.

ಬೀದರ ರೈಲು ನಿಲ್ದಾಣದಲ್ಲಿ ಎರಡು ಪ್ಲಾಟ ಫಾರಂ, ಎರಡು ಟಿಕೆಟ್ ಕೌಂಟರ್, ಎಲಿಮಿನೇಟರ್ ಆಗಬೇಕಾಗಿದೆ ಬೀದರ-ಔರಾದ-ನಾಂದೇಡ್ ಹೊಸ ರೈಲು ಮಾರ್ಗಕ್ಕೆ 100 ಕೋಟಿ ಹಣವನ್ನು ಬಜೇಟನಲ್ಲಿ ಮಿಸಲಿಡಲಾಗಿದ್ದು ಕರ್ನಾಟಕ ಮತ್ತು ಮಹರಾಷ್ಟ್ರ ಸರ್ಕಾಗಳು ತಮ್ಮ ಸಮಪಾಲಿನ ಹಣವನ್ನು ನೀಡಲಿವೆ ಎಂದು ಹೇಳಿದರು.

ಸಿಕಿಂದ್ರಾಬಾದ ಡಿವಿಜನಲ್ ರೈಲ್ವೆ ಮ್ಯಾನೆಜರ್ ಎ.ಕೆ ಗುಪ್ತಾ ಅವರು ಮಾತನಾಡಿ, ಸಿಕಿಂದ್ರಾಬಾದ ರೈಲ್ವೆ ವಿಭಾಗವು ಸ್ಥಳೀಯ ಪ್ರಯಾಣಿಕರಿಗಾಗಿ ಇಂಟರಸಿಟಿ ರೈಲುಗಳ ಮೂಲಕ ಸಾರ್ವಜನಿಕರಿಗೆ ಅವಕುಲವಾಗುವ ನಿಟ್ಟಿನಲ್ಲಿ ಉತ್ತಮ ಸೇವೆಯನ್ನು ಒದಗಿಸಲಾಗುತ್ತಿದ್ದು ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಕಾರ್ಯಕ್ರದಲ್ಲಿ ಬೀದರ ಶಾಸಕ ರಹೀಮ ಖಾನ್, ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪೂರೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.