ಅಮೂಲ ಜತೆಗೆ ನಂದಿನಿ ವಿಲೀನ ಬೇಡ

ಭಾಲ್ಕಿ:ಎ.12: ಕನ್ನಡಿಗರ ಹೆಮ್ಮೆ, ರೈತರ ಕಾಮಧೇನು ಆಗಿರುವ ರಾಜ್ಯದ ನಂದಿನಿ(ಕೆಎಂಎಫ್) ಯಾವುದೇ ಕಾರಣಕ್ಕೂ ಗುಜರಾತ್‍ನ ಅಮೂಲ ಸಂಸ್ಥೆ ಜತೆಗೆ ವಿಲೀನ ಮಾಡಬಾರದು ಎಂದು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ. ಈ ಕುರಿತು ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಾಲೂಕು ಕರವೇ ಗೌರವಾಧ್ಯಕ್ಷ ರಮೇಶ ಚಿದ್ರಿ ಮತ್ತು ಅಧ್ಯಕ್ಷ ಗಣೇಶ ಪಾಟೀಲ್ ನೇತೃತ್ವದಲ್ಲಿ ಮಂಗಳವಾರ ತಹಸೀಲ್ದಾರ ಮೂಲಕ ಕೇಂದ್ರದ ಗೃಹ ಸಚಿವರಿಗೆ ಮನವಿ ಸಲ್ಲಿಸಿದೆ.

ರಾಜ್ಯದ ರೈತರ ಜೀವಾಳ ನಂದಿನಿ ಆಗಿದೆ. ಸುಮಾರು 17 ಸಾವಿರಕ್ಕೂ ಅಧಿಕ ಹಾಲು ಉತ್ಪಾದಕರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ನಂದಿನಿ ಉತ್ಪನ್ನಗಳಿಂದ ರಾಜ್ಯಕ್ಕೆ ಪ್ರತಿವರ್ಷ ಸಾವಿರಾರೂ ಕೋಟಿ ರೂ ಆದಾಯ ಬರುತ್ತಿದೆ. ನಂದಿನಿಯ ಕ್ಷೀರ ಭಾಗ್ಯ ಯೋಜನೆ ಸರಕಾರಿ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆ ಮಾಡುತ್ತಿದೆ.

ಹೀಗಿರುವಾಗ ಇದರಲ್ಲಿ ಅನಗತ್ಯ ರಾಜಕಾರಣ ತಂದು ನಂದಿನಿ ಜತೆಗೆ ಅಮೂಲ ವಿಲೀನ ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸಿರುವುದು ಸರಿಯಲ್ಲ. ಇಂತಹ ಚಿಂತನೆ, ವಿಚಾರ ಸರಕಾರ ಕೂಡಲೇ ಕೈಬಿಟ್ಟು ನಂದಿನಿ ಉತ್ತೇಜನಕ್ಕೆ ಮತ್ತಷ್ಟು ಬಲ ತುಂಬುವ ಕೆಲಸ ಮಾಡಬೇಕು. ಒಂದು ವೇಳೆ ವಿಲೀನಕ್ಕೆ ಮುಂದಾದರೇ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕೇಂದ್ರದ ಗೃಹ ಸಚಿವರಿಗೆ ಬರೆದ ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ತಾಲೂಕು ಕರವೇ ಯುವ ಘಟಕದ ಅಧ್ಯಕ್ಷ ಸುದೀಪ ತೂಗಾಂವೆ, ಪ್ರಮುಖರಾದ ಬಸವರಾಜ ಕಾರಬಾರಿ, ಧನರಾಜ ಪಾಟೀಲ್, ಚೇತನ ಬಿರಾದಾರ್, ಲೋಕೇಶ ಪಾಟೀಲ್, ಸುನೀಲ ಮೇತ್ರೆ, ದಶರಥ ಡೋಳೆ, ವೀರಶೆಟ್ಟಿ ಮಿರ್ಚಿ, ವೈಜಿನಾಥ ಮೂಲಗೆ, ಮೀತುನ್ ಗಾಮಾ, ಸತೀಶ ಪಾಟೀಲ್ ಸೇರಿದಂತೆ ಹಲವರು ಇದ್ದರು.