ರಾಜ್ಯದಲ್ಲಿ ನಂದಿನಿ ನಂಬರ್ ಒನ್

ನವದೆಹಲಿ, ಏ.೮- ಅಮೂಲ್ ವಿಚಾರದಲ್ಲಿ ವಿಪಕ್ಷಗಳು ರಾಜಕಾರಣ ಮಾಡುತ್ತಿವೆ. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟವನ್ನು ನಾವೂ ಕೂಡ ಮಾಡಿದ್ದೇವೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಮೂಲ್‌ನ್ನು ಹಿಮ್ಮೆಟ್ಟಿಸಲು ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದರು.
ನಂದಿನಿ ನಂ. ೧ ಬ್ರಾಂಡ್ ಆಗಲಿದ್ದು, ಅಮೂಲ್ ವಿಚಾರದಲ್ಲಿ ರಾಜಕಾರಣ ಬೇಡ ಎಂದು ಅವರು ಹೇಳಿದರು.
ಸಭೆಯಲ್ಲಿ ನಿರ್ಧಾರ
ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ಇಂದು ಸಂಜೆ ೫ ಗಂಟೆಗೆ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಎಲ್ಲ ೨೨೪ ಕ್ಷೇತ್ರಗಳ ಗ್ಗೆಯೂ ಚರ್ಚೆ ನಡೆಯಲಿದೆ ಎಂದರು.
ಕೆಲ ಎಂಎಲ್‌ಸಿಗಳು ಮತ್ತು ಸಂಸದರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಇವರಿಗೆ ಟಿಕೆಟ್ ನೀಡಬೇಕೇ ಬೇಡವೇ ಎಂಬ ಬಗ್ಗೆಯೂ ತೀರ್ಮಾನವಾಗಲಿದೆ ಎಂದು ಹೇಳಿದರು.
ಹಾಲಿ ಶಾಸಕರಲ್ಲಿ ಕೆಲವರಿಗೆ ಟಿಕೆಟ್ ಸಿಗಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆಯೂ ಸಭೆಯಲ್ಲೇ ತೀರ್ಮಾನಗಳಾಗುತ್ತವೆ ಎಂದರು.
ನಟ ಸುದೀಪ್ ಬಿಜೆಪಿಗೆ ಬೆಂಬಲ ನೀಡಿರುವುದು ಕಾಂಗ್ರೆಸ್‌ಗೆ ಸಹಜವಾಗಿ ನಡುಕ ಹುಟ್ಟಿಸಿದೆ. ನಟರನ್ನು ಚುನಾವಣಾ ಪ್ರಚಾರಕ್ಕೆ ಕರೆ ತರುವುದು ಹೊಸದಲ್ಲ. ಈ ಹಿಂದೆ ಅಂಬರೀಷ್‌ರವರು ಕಾಂಗ್ರೆಸ್ ಪರ ಪ್ರಚಾರ ಮಾಡಲಿಲ್ಲವೇ ಎಂದು ಅವರು ಹೇಳಿದರು.