ಅಮುಲ್ ವಿರುದ್ಧ ಹೋರಾಟ ಕರವೇ ಎಚ್ಚರಿಕೆ

ಬೆಂಗಳೂರು,ಏ.೮-ಇ-ಕಾಮರ್ಸ್ ಅಡಿಯಲ್ಲಿ ಅಮುಲ್ ಹಾಲು, ಮೊಸರು ಮಾರಾಟಕ್ಕೆ ಮುಂದಾದರೆ ಅಂತಹ ಸಂಸ್ಥೆಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ನಡೆಸಲು ನಿರ್ಧರಿಸಿದೆ.
ರಾಜ್ಯದಲ್ಲಿ ಅಮುಲ್ ಮಾರಾಟ ನಿಲ್ಲಿಸಬೇಕು, ಇಲ್ಲವಾದಲ್ಲಿ ಆಗುವ ಅನಾಹುತಕ್ಕೆ ಸಂಸ್ಥೆಗಳೇ ಜವಾಬ್ದಾರಿಯಾಗುತ್ತವೆ ಎಂದು ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಎಚ್ಚರಿಕೆ ನೀಡಿದ್ದಾರೆ.
ಆಂಧ್ರಪ್ರದೇಶದ ಕಲಬೆರೆಕೆ ಹಾಲಿನ ವಿರುದ್ಧ ಹೋರಾಟ ಸಂಘಟಿಸಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದ ವೇದಿಕೆಯು ಅದೇ ರೀತಿ ಈಗ ಅಮುಲ್ ವಿರುದ್ಧವೂ ಚಳವಳಿ ರೂಪಿಸಿ ನಂದಿನಿ ವಿರುದ್ಧ ನಡೆದಿರುವ ಪಿತೂರಿಗೆ ತಕ್ಕ ಪಾಠ ಕಲಿಸಲಿದೆ.
ಕನ್ನಡಿಗರು ಕಷ್ಟಪಟ್ಟು ಬೆಳೆಸಿದ ನಂದಿನಿ ಬ್ರಾಂಡ್ ಅನ್ನು ಮುಗಿಸಲೆಂದೇ ಅಮುಲ್ ಹಾಲು-ಮೊಸರನ್ನು ರಾಜ್ಯಕ್ಕೆ ತರಲಾಗುತ್ತಿದೆ. ರಾಜ್ಯದ ರೈತರನ್ನು ಭಿಕ್ಷುಕರನ್ನಾಗಿಸುವ ಸಂಚು ನಡೆಯುತ್ತಿದೆ. ಕನ್ನಡಿಗರು ಸ್ವಾಭಿಮಾನಿಗಳು, ಕೆರಳಿ ನಿಂತರೆ ಇಂಥ ಸಂಚುಗಳನ್ನು ವಿಫಲಗೊಳಿಸುವುದು ಅವರಿಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಅಮುಲ್ ನೊಂದಿಗೆ ನಂದಿನಿ ಸೇರಿದಂತೆ ದೇಶದ ವಿವಿಧ ಹಾಲು ಉತ್ಪಾದಕ ಸಂಸ್ಥೆಗಳನ್ನು ವಿಲೀನಗೊಳಿಸುವ ಮಾತುಗಳನ್ನು ಆಡಿದ ಬೆನ್ನಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಕೇಂದ್ರ ಸರ್ಕಾರವೇ ಪಿತೂರಿಯ ಹಿಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಗುಜರಾತಿ ಲಾಬಿಗೆ ನಾವು ಮಣಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಕಾಲ ಇದಾಗಿದೆ.
ರಾಜ್ಯದ ಬಹುಪಾಲು ರೈತರು ಹಾಲು ಉತ್ಪಾದನೆಯನ್ನು ನೆಚ್ಚಿಕೊಂಡು ಬದುಕುತ್ತಿದ್ದಾರೆ. ಅವರನ್ನು ಗುಜರಾತಿ ವ್ಯಾಪಾರಿಗಳ ಅಡಿಯಾಳಾಗಿ ಮಾಡುವ ಹುನ್ನಾರವೇ ಅಮುಲ್-ನಂದಿನಿ ವಿಲೀನದ ಪ್ರಸ್ತಾಪ. ಅದನ್ನು ಜಾರಿಗೊಳಿಸುವ ಸಲುವಾಗಿಯೇ ಅಮುಲ್ ಹಾಲು-ಮೊಸರು ರಾಜ್ಯವನ್ನು ಪ್ರವೇಶಿಸುತ್ತಿದೆ.
ಅಮುಲ್ ಪ್ರವೇಶಕ್ಕಾಗಿಯೇ ವೇದಿಕೆ ಸಜ್ಜುಗೊಳಿಸಲಾಗಿದೆ. ಕೃತಕವಾಗಿ ನಂದಿನ ಹಾಲಿನ ಪೂರೈಕೆ ಕುಸಿಯುವಂತೆ ಮಾಡಲಾಗಿದೆ. ಇದ್ದಕ್ಕಿದ್ದಂತೆ ನಂದಿನಿ ಹಾಲಿನ ಉತ್ಪಾದನೆ ಕುಸಿಯಲು ಕಾರಣವೇನು? ನಂದಿನಿಯನ್ನು ಮುಗಿಸಲು ಕೆಎಂಎಫ್ ಅಧಿಕಾರಿಗಳಿಗೆ ಸುಪಾರಿ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು.
ಲಾಭದಲ್ಲಿದ್ದ ಕರ್ನಾಟಕದ ಬ್ಯಾಂಕುಗಳನ್ನು ನಷ್ಟದಲ್ಲಿದ್ದ ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲಾಯಿತು. ಅದೇ ರೀತಿ ಅಮುಲ್ ಜೊತೆಗೆ ನಂದಿನಿಯನ್ನು ವಿಲೀನಗೊಳಿಸುವ ಹುನ್ನಾರ ನಡೆದಿದೆ. ಕರ್ನಾಟಕದ ರೈತರ ಬದುಕಿಗೆ ಕೊಳ್ಳಿ ಇಡಲು ಬಂದರೆ ಕನ್ನಡಿಗರು ದಂಗೆ ಏಳುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.