ಅಮೂಲ್ ನಂದಿನಿ ವಿಲೀನ ಅಗತ್ಯವಿಲ್ಲ

ಬೆಂಗಳೂರು, ಜ. ೧- ಅಮೂಲ್ ಜತೆ ನಂದಿನಿಯನ್ನು ವಿಲೀನಗೊಳಿಸುವ ಅಗತ್ಯವಿಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಅಮೂಲ್ ಹಾಗೂ ನಂದಿನಿಯನ್ನು ವಿಲೀನಗೊಳಿಸುವ ನಿರ್ಣಯ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿನಿ ನಮ್ಮ ರಾಜ್ಯಕ್ಕೆ ಸೇರಿದ್ದು, ಹಾಲು, ನೀರು, ನೆಲ ಇದು ನಮ್ಮ ಹಕ್ಕು, ಕೆಎಂಎಫ್ ಲಾಭದಾಯಕವಾಗಿ ನಡೆಯುತ್ತಿದೆ. ಇದನ್ನು ಯಾವ ರಾಜ್ಯದ ಹಾಲು ಮಂಡಲಿ ಜತೆಗೆ ವಿಲೀನ ಮಾಡುವ ಅವಶ್ಯಕತೆ ಇಲ್ಲ ಎಂದರು..
ರೈತರನ್ನು ಶಕ್ತಿಶಾಲಿಯನ್ನಾಗಿ ಮಾಡಬೇಕು. ಅದು ಬಿಟ್ಟು ವಿಲೀನದ ಬಗ್ಗೆ ಮಾತನಾಡುವುದು ಸರಿಯಲ್ಲ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಗುಡುಗಿದರು.
ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದರು. ಇವತ್ತು ಯಾವ ಪರಿಸ್ಥಿತಿ ಇದೆ. ಅಗತ್ಯ ವಸ್ತುಗಳ ಬೆಲೆ ಏರುತ್ತಿದೆ. ದೊಡ್ಡ ಉದ್ಯಮಿಗಳನ್ನು ಬಿಜೆಪಿ ಜೇಬಿನಲ್ಲಿಟ್ಟುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯವರು ಚುನಾವಣೆಯನ್ನು ಭಾವನೆಗಳ ಮೇಲೆ ಎದುರಿಸುತ್ತಾರೆ. ಕಾಂಗ್ರೆಸ್ ಬದುಕಿನ ಮೇಲೆ ಎದುರಿಸುತ್ತದೆ. ಕಾಂಗ್ರೆಸ್‌ನಲ್ಲಿ ಸಾಮೂಹಿಕ ನಾಯಕತ್ವ ಇದೆ. ಹಾಗಾಗಿ, ಕಾಂಗ್ರೆಸ್‌ನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅಮಿತ್ ಶಾರವರಿಗೆ ಅರಿವಾಗಿದೆ. ರಾಜ್ಯದ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಅವರಿಗೆ ಸಮಾಧಾನವಿಲ್ಲ. ಅದಕ್ಕಾಗಿ ಅವರು ಮೋದಿ ಹೆಸರಿನೊಂದಿಗೆ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಸ್ಪರ್ಧೆ ಏರ್ಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ಪರ್ಧೆ ಇರುವ ಕಡೆ ಯುದ್ಧ ಆಗುತ್ತದೆ, ಮೊದಲು ನಮ್ಮಲ್ಲಿ ಯುದ್ಧ ಮಾಡಿಕೊಂಡು ನಂತರ ಬಿಜೆಪಿ ಮೇಲೆ ಯುದ್ಧ ಮಾಡಬೇಕು, ನಮ್ಮಲ್ಲಿ ಯಾವ ಬಣಗಳು ಇಲ್ಲ. ಇರುವುದು ಒಂದೇ ಬಣ ಅದು ಕಾಂಗ್ರೆಸ್ ಎಂದರು.