ಅಮೂಲ್ ಉತ್ಪನ್ನ ಖರೀದಿ ಬೇಡ

ಬೆಂಗಳೂರು,ಏ.೭:ರಾಜ್ಯದಲ್ಲಿ ಕೆಎಂಎಫ್‌ನ ಮುಗಿಸಲು ಅಮೂಲ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದನ್ನು ವಿರೋಧಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಅಮೂಲ್ ಉತ್ಪನ್ನವನ್ನು ಖರೀದಿಸಲ್ಲ ಎಂದು ಕನ್ನಡಿಗರು ಪ್ರತಿಜ್ಞೆ ಮಾಡಬೇಕು ಎಂದಿದ್ದಾರೆ.
ರಾಜ್ಯ ಬಿಜೆಪಿಯ ದುರ್ಬಲ ನಾಯಕತ್ವದಿಂದಾಗಿ ಹೈನುಗಾರಿಕೆ ಕುಟುಂಬದ ಜೀವನಾಧಾರವಾಗಿರುವ ಕೆಎಂಎಫ್ ಬಲಿ ಪಡೆಯುವ ಎಲ್ಲ ಪ್ರಯತ್ನಗಳು ಪ್ರಾರಂಭವಾಗಿದ್ದು, ಇದಕ್ಕೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರ ಕಾರಣ ಎಂದು ಸಿದ್ದರಾಮಯ್ಯ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಅಮೂಲ್ ಐಸ್ ಕ್ರೀಂ ಸೇರಿದಂತೆ ಹಲವು ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದೆ. ಈಗ ಹಾಲು-ಮೊಸರನ್ನು ರಾಜ್ಯದ ಮಾರುಕಟ್ಟೆಗೆ ತರಲು ಹೊರಟಿದೆ. ಇದರ ವಿರುದ್ಧ ಕನ್ನಡಿಗರು ಗೋ ಬ್ಯಾಕ್ ಅಭಿಯಾನ ಆರಂಭಿಸುವ ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಸಿದ್ದರಾಮಯ್ಯ ಹೇಳಿ, ಕನ್ನಡಿಗರು ಅಮೂಲ್ ಉತ್ಪನ್ನಗಳನ್ನು ಖರೀದಿಸಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದಿದ್ದಾರೆ.
ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು, ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನೂ ಅಪೋಶನ ತೆಗೆದುಕೊಳ್ಳಲು ಪ್ರಧಾನಿ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ. ಕನ್ನಡಿಗರೇ ಎಚ್ಚರ ಎಂದು ಸಿದ್ದರಾಮಯ್ಯ ಪಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ತಕ್ಷಣ ಮಧ್ಯ ಪ್ರವೇಶಿಸಿ ಹಿಂಬಾಗಿಲಿನಿಂದ ಪ್ರವೇಶಿಸುತ್ತಿರುವ ಅಮೂಲ್ ಸಂಸ್ಥೆಯನ್ನು ತಡೆಯಬೇಕಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾರವರಿಗೆ ರಾಜ್ಯದ ಜನಾಭಿಪ್ರಾಯವನ್ನು ಗಮನಕ್ಕೆ ತಂದು ಈ ದ್ರೋಹ ಚಿಂತನೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.