ಅಮೂಲ್ಯ ಮತವನ್ನು ಮಾರಾಟ ಮಾಡದಿರಿ : ರಾವೂರಶ್ರೀ

ವಾಡಿ: ಏ. 12: ಚುನಾವಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರಬುನಾದಿಗಳು. ಚುನಾವಣೆಗಳಲ್ಲಿ ನಮ್ಮ ಅಮೂಲ್ಯ ಮತವನ್ನು ವಸ್ತು ಹಣ ಹೆಂಡಕ್ಕೆ ಮಾರಿಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ದಯವಿಟ್ಟು ಮಾರಾಟವಾಗದೇ, ಕಡ್ಡಾಯವಾಗಿ ಮತ ಚಲಾಯಿಸಿ ಎಂದು ರಾವೂರ ಸ್ರೀ ಸಿದ್ದಲಿಂಗೆರ್ಶವರ ಸಂಸ್ಥಾನ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.

ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿಧ್ಯಾಭಿವೃದ್ಧಿ ಸಂಸ್ಥೆಯ ವಿವಿಧ ಪ್ರಕಲ್ಪಗಳ ಅಡಿಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾವನ್ನು ಉದ್ದೇಶಿಸಿ ಮಾತನಾಡುತ್ತಾ ಮತದಾನ ಮಾರಾಟದಿಂದ ಭ್ರಷ್ಠ ರಾಜಕೀಯ ವ್ಯವಸ್ಥೆ ನಮ್ಮನ್ನು ಗುಲಾಮರಂತೆ ದುಡಿಸಿಕೊಳ್ಳುತ್ತದೆ. ಯಾವುದೇ ಆಮೀಷಕ್ಕೆ ಒಳಗಾಗದೆ ನಿರ್ಭಯವಾಗಿ, ಮುಕ್ತವಾಗಿ ಮತದಾನ ಚಲಾಯಿಸಿ ಎಂದರು.

ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ ಮಾತನಾಡಿ, ಹದಿನೆಂಟು ವರ್ಷ ತುಂಬಿದ ಅರ್ಹ ಮತದಾರರು ಚುನಾವಣಾ ಪ್ರಕ್ರೀಯೆಯಲ್ಲಿ ಪಾಲ್ಗೊಂಡು ಮತಬೇಕು. ಮತದಾನ ನಮ್ಮ ಹಕ್ಕು ಅದನ್ನು ಚಲಾಯಿಸುವ ಮೂಲಕ ದೇಶದ ಋಣ ತೀರಿಸಬೇಕು. ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನು ನಿರ್ಮಿಸಬೇಕು. ಸುತ್ತ ಮುತ್ತಲಿನ ಜನರಿಗೂ ಮತದಾನದ ಮಹತ್ವ ತಿಳಿಸಿಕೊಡಬೇಕು ಎಂದು ಹೇಳಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿಕ್ಷಕರು ಮಕ್ಕಳೊಂದಿಗೆ ಭಿತ್ತ ಫಲಕಗಳನ್ನು ಹಿಡಿದು ಮತದಾನ ಜಾಗೃತಿಯ ಘೋಷಣೆಗಳನ್ನು ಕೂಗುತ್ತಾ ಮತದಾರರಿಗೆ ಮತದಾನದ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯಗುರು ವಿಧ್ಯಾಧರ ಖಂಡಾಳ, ಪ್ರಾಥಮಿಕ ವಿಭಾಗದ ಮುಖ್ಯಗುರು ಚನ್ನಬಸಪ್ಪ ಬಂಡೇರ, ಶಿಕ್ಷಕರಾದ ಭೀಮಾಶಂಕರ ಬಮ್ಮನಳ್ಳಿ, ಶಿವಕುಮಾರ ಸರಡಗಿ, ಗಂಗಪ್ಪ ಕಟ್ಟಿಮನಿ, ಸುಭಾಷ ಚವ್ಹಾಣ, ರಾಧಾ ರಾಠೋಡ, ಮಂಜುಳಾ ಪಾಟೀಲ, ಬಾಬು ಕಣ್ಣೂರ ಸೇರಿದಂತೆ ಮಕ್ಕಳು ಗ್ರಾಮಸ್ಥರು ಉಪಸ್ಥಿತರಿದ್ದರು.