ಅಮೂಲ್ಯ ಜೀವನ ವ್ಯರ್ಥ ಮಾಡಿಕೊಳ್ಳದಿರಿ

ಬೀದರ್: ಸೆ.10:ಮಾನವ ಜನ್ಮ ಬಹಳ ಅಮೂಲ್ಯವಾದದ್ದು. ಅದನ್ನು ವ್ಯರ್ಥ ಮಾಡಿಕೊಳ್ಳಬಾರದು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು.

ಬೀದರ್ ತಾಲ್ಲೂಕಿನ ನಾಗೂರ ಗ್ರಾಮದ ಹನುಮಾನ ಮಂದಿರದಲ್ಲಿ ಆಯೋಜಿಸಿದ್ದ ಹನುಮಾನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಒಳ್ಳೆಯ ನಡೆ, ನುಡಿ, ದೇವರ ಸ್ಮರಣೆ, ಪೂಜೆ, ಪ್ರಾರ್ಥನೆ ಮೂಲಕ ಬದುಕು ಸಾರ್ಥಕ ಮಾಡಿಕೊಳ್ಳಬೇಕು ಎಂದು ನುಡಿದರು.

ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕು. ಕೈಲಾದ ಪರೋಪಕಾರದ ಕಾರ್ಯಗಳನ್ನು ಮಾಡಬೇಕು. ಅತ್ತೆ-ಸೊಸೆ ತಾಯಿ-ಮಕ್ಕಳಂತೆ ಇರಬೇಕು. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಸರಳ, ಸಹಜ ಬದುಕು ನಡೆಸಬೇಕು. ಅನೇಕ ಆರೋಗ್ಯ ಸಮಸ್ಯೆಗಳಿಗೆ ಇಂದಿನ ಆಹಾರ ಪದ್ಧತಿಯೇ ಕಾರಣವಾಗಿದೆ. ಹೀಗಾಗಿ ದೇಸಿ ಆಹಾರ ಪದ್ಧತಿಯನ್ನು ಅನುಸರಿಸಬೇಕು ಎಂದು ತಿಳಿಸಿದರು.

ಆಧ್ಯಾತ್ಮದಿಂದ ನೆಮ್ಮದಿಯ ಬದುಕು ಸಾಧ್ಯವಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಭಜನೆ, ಕೀರ್ತನೆ, ಪ್ರವಚನ ಸೇರಿದಂತೆ ಆಧ್ಯಾತ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.

ನಿವೃತ್ತ ಮುಖ್ಯಶಿಕ್ಷಕ ಸಿದ್ಧಾರೆಡ್ಡಿ ನಾಗೂರಾ, ಶಿವಕುಮಾರ ಪಾಪಣ್ಣ, ವೆಂಕಟರೆಡ್ಡಿ ಮರಿ, ರಾಜರೆಡ್ಡಿ ರಾಮರೆಡ್ಡಿ, ಕೇಶಪ್ಪ ಚಟ್ನಳ್ಳಿಕರ್, ಸುಭಾಷ್ ಪೊಲೀಸ್ ಪಾಟೀಲ ಯಾಕತಪುರ ಮತ್ತಿತರರು ಇದ್ದರು.