ಅಮುಲ್ ವಹಿವಾಟು: ಕನ್ನಡಿಗರು ಸಿಡಿದೇಳಲಿ

ಬೆಂಗಳೂರು, ಏ.೮- ಅಮುಲ್ ಉತ್ಪನ್ನ ವಹಿವಾಟು ನಡೆಸುತ್ತಿರುವ ಬಗ್ಗೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅಪ್ಪಟ ಕನ್ನಡದ ನಂದಿನಿಯನ್ನು ಗುಜರಾತಿನ ಅಮುಲ್ ನುಂಗಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಮುಲ್ ಉತ್ಪನ್ನದ ವಿರುದ್ಧ ಕನ್ನಡಿಗರು ಹೋರಾಟ ನಡೆಸಬೇಕೆಂದು ಅವರು ಕರೆ ಕೊಟ್ಟಿದ್ದಾರೆ.
ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಅಮುಲ್ ಜೊತೆ ನಂದಿನಿ ವಿಲೀನ ಕುರಿತು ಹೇಳಿಕೆ ನೀಡಿದ್ದರು. ಮೊಸರಿನ ಮೇಲೆ ಹಿಂದಿಯ ದಹಿ ಪದ ಮುದ್ರಿಸಿದ ಕ್ರಮಕ್ಕೆ ಕನ್ನಡಿಗರ ಆಕ್ರೋಶ ವ್ಯಕ್ತವಾದ್ದರಿಂದ ಆ ಪದವನ್ನು ತೆಗೆದು ಹಾಕಲಾಗಿತ್ತು. ಈಗ ಅಮುಲ್ ಉತ್ಪನ್ನ ವಹಿವಾಟು ನಡೆಸುವ ಮೂಲಕ ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಟ್ವಿಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಮುಲ್‌ಗೆ ಪ್ರಮುಖ ಸ್ಪರ್ಧಿಯಾಗಿರುವ ನಂದಿನಿಗೆ ರಾಜ್ಯದಲ್ಲಿ ಅಡ್ಡಿ ಮಾಡಬೇಕೆಂಬ ಹುನ್ನಾರ ಕೇಂದ್ರ ಸರ್ಕಾರದ್ದಾಗಿದೆ. ಒಂದು ದೇಶ ಒಂದು ಅಮುಲ್, ಒಂದು ಹಾಲು ಒಂದೇ ಗುಜರಾತ್ ಎನ್ನುವುದು ಕೇಂದ್ರ ಸರ್ಕಾರದ ಅಧಿಕೃತ ನೀತಿಯಾಗಿದೆ. ಅದಕ್ಕೆ ಅಮುಲ್‌ಗೆ ಒತ್ತಾಸೆಯಾಗಿ ನಿಂತು ಕೆಎಂಎಫ್ ಕತ್ತು ಹಿಸುಕಲು ಹೊರಟಿದ್ದು, ಹಿಂಬಾಗಿಲ ಮೂಲಕ ಅಮುಲ್ ರಾಜ್ಯದೊಳಗೆ ನುಗ್ಗುತ್ತಿದೆ ಎಂದು ಹೇಳಿದ್ದಾರೆ.
ಹೈನುಗಾರಿಕೆಯ ಮೂಲ ಉತ್ಪನ್ನ ಹಾಲನ್ನು ತನ್ನ ಬ್ರಾಂಡ್‌ನಲ್ಲಿಯೇ ರಾಜ್ಯದಲ್ಲಿ ಮಾರಾಟ ಮಾಡಲು ಹೊರಟಿದ್ದು, ಈ ಮೂಲಕ ನಂದಿನಿಯನ್ನು ಮುಗಿಸುವ ಹುನ್ನಾರ ನಡೆಸಿದೆ ಎಂದು ಹೇಳಿರುವ ಅವರು ಹಿಂದಿ ಹೇರಿಕೆಗೆ ಪ್ರಬಲ ವಿರೋಧ ಒಡ್ಡುತ್ತಿರುವ ಕನ್ನಡಿಗರು ಮತ್ತು ಕೆಎಂಎಫ್ ಕಥೆ ಮುಗಿಸಲೇಬೆಕೇಂದು ಸಂಕಲ್ಪ ಮಾಡಿದ್ದಾರೆಂದು ಹೇಳಿದ್ದಾರೆ.
ರಾಜ್ಯದ ಹಾಲು ಉತ್ಪಾದಕರನ್ನು ಡಬಲ್ ಇಂಜಿನ್ ಸರ್ಕಾರ ಬೀದಿಪಾಲು ಮಾಡಿ ಗುಜರಾತಿಗಳ ಗುಲಾಮರನ್ನಾಗಿ ಮಾಡಲು ಸಂಚು ರೂಪಸಿರುವುದು ಸ್ಪಷ್ಟವಾಗಿದ್ದು, ಇಷ್ಟೇಲ್ಲಾ ಬೆಳವಣಿಗೆ ನಡೆಯುತ್ತಿದ್ದರು ಬಿಜೆಪಿ ಸರ್ಕಾರ ಮೌನಕ್ಕೆ ಶರಣಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕನ್ನಡಿಗರಾದ ನಾವು ತಕ್ಷಣ ಎಚ್ಚೆತ್ತುಕೊಂಡು ನಂದಿನಿಯನ್ನೇ ಅವಲಂಬಿಸಿರುವ ರಾಜ್ಯದ ರೈತರ ಹಿತ ಕಾಯಬೇಕು ನಂದಿನಿ ಉತ್ಪನ್ನಗಳನ್ನು ರಾಜ್ಯದ ಜನತೆ ಆದ್ಯತೆ ಮೇರೆಗೆ ಬಳಸಿ ಅನ್ನದಾತರ ಬದುಕನ್ನು ಕಾಪಾಡಬೇಕೆಂದು ಅವರು ಮನವಿ ಮಾಡಿದ್ದಾರೆ.