ಅಮುಲ್ ಬಹಿಷ್ಕರಿಸಿ ನಂದಿನಿ ಉಳಿಸಿ

ಬೀದರ್:ಎ.9: ರಾಜ್ಯದ ಜನ ಅಮುಲ್ ಉತ್ಪನ್ನಗಳನ್ನು ಬಹಿಷ್ಕರಿಸಿ ನಂದಿನಿಯನ್ನು ಉಳಿಸಿಕೊಳ್ಳಬೇಕು ಎಂದು ಜಾತ್ಯತೀತ ಜನತಾ ದಳದ ಬೀದರ್ ತಾಲ್ಲೂಕು ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಗುಜರಾತ್ ಮೂಲದ ಸಹಕಾರ ಸಂಸ್ಥೆ ಅಮುಲ್ ಮೂಲಕ ರಾಜ್ಯದ ನಂದಿನಿಯನ್ನು ಮುಗಿಸುವ ಕುತಂತ್ರ ನಡೆಸಿದೆ ಎಂದು ಆಪಾದಿಸಿದ್ದಾರೆ.

ರಾಜ್ಯದಲ್ಲಿ ನಂದಿನಿ ಬ್ರ್ಯಾಂಡ್ ಹಲವು ಖಾಸಗಿ ಸಂಸ್ಥೆಗಳ ಸ್ಪರ್ಧೆ ಎದುರಿಸುತ್ತಿದೆ. ಅಮುಲ್‍ನ ಅನೇಕ ಉತ್ಪನ್ನಗಳು ಈಗಾಗಲೇ ರಾಜ್ಯದ ಮಾರುಕಟ್ಟೆಯಲ್ಲಿವೆ. ಇದೀಗ ಹಾಲು ಹಾಗೂ ಮೋಸರನ್ನೂ ಮಾರಾಟ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ನಂದಿನಿಯನ್ನು ಅಮುಲ್‍ನಲ್ಲಿ ವಿಲೀನಗೊಳಿಸುವ ಬಗ್ಗೆ ಕೇಂದ್ರ ಸಹಕಾರ ಸಚಿವರು ಕೊಟ್ಟಿರುವ ಹೇಳಿಕೆ ಕನ್ನಡಿಗರಿಗೆ ಆಘಾತ ಉಂಟು ಮಾಡಿದೆ. ಕರ್ನಾಟಕದ ಅಸ್ಮಿತೆಯಾದ ನಂದಿನಿಯನ್ನು ಉಳಿಸಿಕೊಳ್ಳಬೇಕಾದ ಹೊಣೆ ಕನ್ನಡಿಗರ ಮೇಲಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಹಾಲು ಮಹಾ ಮಂಡಳದ ನಂದಿನಿಯ ತಂಟೆಗೆ ಬಂದರೆ ರಾಜ್ಯದಲ್ಲಿ ಬಿಜೆಪಿ ಗಂಭೀರ ಪರಿಣಾಮ ಎದುರಿಸಬೇಕಾಗಲಿದೆ. ನಂದಿನಿಯನ್ನು ಯಾವುದೇ ಕಾರಣಕ್ಕೂ ಅಮುಲ್‍ನಲ್ಲಿ ವಿಲೀನಗೊಳಿಸುವುದನ್ನು ಕನ್ನಡಿಗರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.