ಕಲಬುರಗಿ,ಏ.11-ಕರ್ನಾಟಕ ರಾಜ್ಯದ ಕ್ಷೀರೋದ್ಯಮದ ಮುಕುಟ ಪ್ರಾಯವಾದ ‘ನಂದಿನಿ’ ಹೆಸರಿನಿಂದ ಪ್ರಚಲಿತವಾದ ಕರ್ನಾಟಕ ಹಾಲು ಒಕ್ಕೂಟ ಹೈನುಗಾರಿಕೆ ಸಂಸ್ಥೆಯನ್ನು, ದೂರಗಾಮಿ ನೆಲೆಯಲ್ಲಿ ಖಾಸಗೀಕರಣ ಮಾಡುವ ನೀಲಿ ನಕ್ಷೆ ತಯಾರಿಸಿ ತನ್ಮೂಲಕ, ಪ್ರತಿಷ್ಠಿತ ಸಹಕಾರಿ ಕ್ಷೇತ್ರವನ್ನು ಮುಖೇಶ್ ಅಂಬಾನಿಗೆ ವಹಿಸಲು, ಮೊದಲನೆಯ ಹೆಜ್ಜೆಯಾಗಿ ‘ಅಮುಲ್’ ನ ಜೊತೆ ನಂದಿನಿಯನ್ನು ವಿಲೀನಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾಧ್ಯಕ್ಷ ಗಣಪತರಾವ ಕೆ.ಮಾನೆ ಹಾಗೂ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್.ಬಿ.ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಇದನ್ನು ಜಾರಿಗೊಳಿಸಲು ಉತ್ಸುಕರಾಗಿರುವ ಕರ್ನಾಟಕ ರಾಜ್ಯ ಸರ್ಕಾರ ಕೂಡಲೇ ಈ ನೀತಿಯನ್ನು ಹಿಂತೆಗೆದುಕೊಳ್ಳಬೇಕೇಂದು ಆಗ್ರಹಿಸಿದ್ದಾರೆ.
ಕೆಎಂಎಫ್ ಕರ್ನಾಟಕ ರಾಜ್ಯದಾದ್ಯಂತ 16 ಹಾಲು ಒಕ್ಕೂಟಗಳನ್ನು ಹೊಂದಿದೆ. ಇದು ಪ್ರಾಥಮಿಕ ಡೈರಿ ಸಹಕಾರ ಸಂಘಗಳಿಂದ (ಡಿಸಿಎಸ್) ಹಾಲನ್ನು ಸಂಗ್ರಹಿಸುತ್ತದೆ. ಮೂಲಗಳ ಪ್ರಕಾರ, ಡೈರಿ ಸಹಕಾರಿಯು ಈಗ ರಾಜ್ಯದಲ್ಲಿ 26 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರಿಂದ ದಿನಕ್ಕೆ 75.6 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿದೆ. 2021-22 ರಲ್ಲಿ, ಹಾಲಿನ ಉತ್ಪಾದನೆಯು ದಿನಕ್ಕೆ 84.5 ಲಕ್ಷ ಲೀಟರ್ ಆಗಿತ್ತು. ಹಲವು ಸಾರಿ ಗರಿಷ್ಠ ದಿನಕ್ಕೆ 91 ಲಕ್ಷ ಲೀಟರ್ ಸಂಗ್ರಹವಾಗಿದೆ. ಈಗ ದಿನದ ಸರಾಸರಿ ಉತ್ಪಾದನೆಯು 81 ಲಕ್ಷ ಲೀಟರ್ ಸಂಗ್ರಹವಾಗುತ್ತಿದೆ.
2011 ರಲ್ಲಿ ಸಂವಿಧಾನದ 97ನೇ ವಿಧಿಗೆ ತಂದಿದ್ದ ತಿದ್ದುಪಡಿಯನ್ನು ಉಪಯೋಗಿಸಿಕೊಂಡು ಸ್ಥಳೀಯ ಸಹಕಾರಿ ಸಂಘಗಳಡಿ ನೊಂದಾಯಿತವಾಗಿದ್ದ ಕೇಂದ್ರದ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸಿತು. ಆದರೆ ಸರ್ವೋಚ್ಚ ನ್ಯಾಯಾಲಯ, ಈ ತಿದ್ದುಪಡಿ ಕೇವಲ ಬಹು-ರಾಜ್ಯ ಸಹಕಾರಿ ಸಂಘಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು 2022ರ ಅಕ್ಟೋಬರ್ ನಲ್ಲಿ ತೀರ್ಪು ನೀಡಿತು. ಈಗ ಪುನಃ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆ ಮಂಡಿಸಿ ಅಮುಲ್ ಸೇರಿದಂತೆ ಒಟ್ಟು 5 ಬಹು-ರಾಜ್ಯ ಸಹಕಾರಿ ಸಂಸ್ಥೆಗಳೊಂದಿಗೆ ಕೆಎಂಎಫ್‍ನ್ನು ವಿಲೀನಗೊಳಿಸಿ ಪೂರ್ಣವಾಗಿ ಕೇಂದ್ರದ ಕಾನೂನಿನ ಆಡಳಿತಕ್ಕೆ ಒಳಪಡಿಸುವ ಇರಾದೆ ಹೊಂದಿದೆ. ಆಗ ರಾಜ್ಯದ ಸ್ವಾಯತ್ತತೆ ಅಧಿಕಾರ ನೀರುಪಾಲಾಗುತ್ತದೆ. ಕೇಂದ್ರದ ಈ ನೀತಿಯು ಕೇಂದ್ರಿಕರಣದ ನೆಪದಲ್ಲಿ ಕ್ಷೀರ ಉದ್ಯಮವನ್ನು ಏಕಸ್ವಾಮ್ಯವನ್ನಾಗಿಸುತ್ತದೆ. ಕಾಲಾನಂತರ ಈ 5 ಸಂಸ್ಥೆಗಳು ನಷ್ಟ ಹೊಂದುತ್ತಿವೆ ಎಂಬ ನೆಪ ಹೇಳಿ ದೇಶದ ಎಲ್ಲಾ ಕ್ಷೀರೋದ್ಯಮಗಳನ್ನು ಕಾಪೆರ್Çರೇಟ್ ಬಂಡವಾಳಿಗರ ತೆಕ್ಕೆಗೆ ನೀಡುವ ಷಡ್ಯಂತ್ರ ಇದರಲ್ಲಿ ಅಡಗಿದೆ. ಆದುದರಿಂದಲೇ ಇದು ಅತ್ಯಂತ ಅಪಾಯಕಾರಿಯಾಗಿದೆ.
ಈಗಾಗಲೇ ಆರ್‍ಸಿಇಪಿ ಯೋಜನೆಗನುಗುಣವಾಗಿ ದೇಶಿಯ ಬಂಡವಾಳಗಾರರು ಆಸ್ಟ್ರೇಲಿಯಾ, ಡೆನ್ಮಾರ್ಕ್ ಹಾಗೂ ಇನ್ನಿತರ ದೇಶದ ಜೊತೆ ಕ್ಷೀರೋದ್ಯಮದ ವಾಣಿಜ್ಯ, ವ್ಯಾಪಾರ, ವಹಿವಾಟು ಕುದುರಿಸಿ ಗರಿಷ್ಟ ಲಾಭ ಗಳಿಸುವ ಕನಸಿನಲ್ಲಿದ್ದಾರೆ.
ಕೊನೆಗೆ ‘ನಂದಿನಿ’ ಯನ್ನು ನೆಚ್ಚಿ ಜೀವನ ಸಾಗಿಸುತ್ತಿರುವ ಕರ್ನಾಟಕದ 26 ಲಕ್ಷ ಕುಟುಂಬಗಳು, ಅಂದರೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇದನ್ನೇ ನಂಬಿ ಜೀವನ ನಡೆಸುತ್ತಿರುವ ಸುಮಾರು 3 ರಿಂದ 4 ಕೋಟಿ ಜನ ಅಕ್ಷರಶಃ ಬೀದಿಗೆ ಬೀಳುತ್ತಾರೆ. ಇದರಲ್ಲಿ ಶೇ 60 ರಷ್ಟು ಹೊಡೆತ ಬೀಳುವುದು ಮಹಿಳೆಯರಿಗೆ. ಅಮುಲ್ ಡೈರಿ ರೈತರು ಸಹ ಇದೇ ಬವಣೆಗೆ ಗುರಿಯಾಗಲಿದ್ದಾರೆ.
ಭಾಷೆ, ಪ್ರಾಂತ್ಯ ಇನ್ನಿತರ ಸಂಕುಚಿತ ಭಾವನೆಗಳಿಗೆ ಬಲಿಯಾಗದೆ ಅಮುಲ್ ಡೈರಿ ಹಾಗೂ ನಂದಿನಿ ಡೈರಿ ಹಾಗೂ ಇನ್ನಿತರ ಡೈರಿಯ ರೈತರು ಒಟ್ಟಾಗಿ ಕಾಪೆರ್Çೀರೇಟ್ ಬಂಡವಾಳಿಗರ ಮುಖವಾಡವನ್ನು ಕಿತ್ತೆಸೆದು ಸಹಕಾರಿ ಹೈನುಗಾರಿಕೆ ಕ್ಷೇತ್ರವನ್ನು ಕಾಪಾಡಲು ಪ್ರಬಲ ಜನಾಂದೋಲನ ಸಂಘಟಿಸಬೇಕೆಂದು ಎಂದು ಅವರು ಕರೆ ನೀಡಿದ್ದಾರೆ.