
ಬೀದರ್:ಎ.13: ನಂದಿನಿ ಉಳಿವಿಗೆ ಜಿಲ್ಲೆಯಲ್ಲಿ ಗುಜರಾತ್ ಮೂಲದ ಅಮುಲ್ ಹಾಲು ಹಾಗೂ ಮೊಸರು ಮಾರಾಟಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಎಚ್ಚರಿಕೆ ನೀಡಿದ್ದಾರೆ.
ಕನ್ನಡಿಗರು ಕಷ್ಟಪಟ್ಟು ಕಟ್ಟಿ, ಬೆಳೆಸಿದ ಕರ್ನಾಟಕ ಹಾಲು ಮಹಾ ಮಂಡಳದ ನಂದಿನಿ ಬ್ರ್ಯಾಂಡ್ ಮುಗಿಸಲು ಅಮುಲ್ ರಾಜ್ಯದಲ್ಲಿ ಹಾಲು ಹಾಗೂ ಮೊಸರು ಮಾರಾಟಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಅಮುಲ್ ಹಾಗೂ ನಂದಿನಿ ವಿಲೀನಗೊಳಿಸುವುದಾಗಿ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಹೇಳಿಕೆ ನೀಡಿದ ಬೆನ್ನಲ್ಲೇ ಅಮುಲ್ ಸಂಸ್ಥೆ ರಾಜ್ಯದಲ್ಲಿ ತನ್ನ ಹಾಲು ಹಾಗೂ ಮೊಸರು ಮಾರಾಟ ಮಾಡುವುದಾಗಿ ಪ್ರಕಟಿಸಿದೆ ಎಂದು ಹೇಳಿದ್ದಾರೆ.
ಅಮುಲ್‍ನಲ್ಲಿ ನಂದಿನಿ ವಿಲೀನಗೊಳಿಸಿದ್ದಲ್ಲ್ಲಿ ರಾಜ್ಯದ ಲಕ್ಷಾಂತರ ರೈತರು ಬೀದಿ ಪಾಲಾಗಲಿದ್ದಾರೆ. ಕನ್ನಡಿಗರ ಹೆಮ್ಮೆಯ ನಂದಿನಿ ಮುಗಿಸುವ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ವೇದಿಕೆ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ನೇತೃತ್ವದಲ್ಲಿ ಈಗಾಗಲೇ ಅಮುಲ್ ವಿರುದ್ಧ ರಾಜ್ಯದಾದ್ಯಂತ ಚಳವಳಿ ರೂಪಿಸಿದೆ. ಅಮುಲ್ ಇ-ಕಾಮರ್ಸ್ ಸಂಸ್ಥೆಗಳ ಮೂಲಕ ಹಾಲು ಹಾಗೂ ಮೊಸರು ಮಾರಾಟ ಶುರು ಮಾಡಿದರೆ ಹೋರಾಟ ನಡೆಸಲಾಗುವುದು. ಅಮುಲ್‍ನ ಎಲ್ಲ ಉತ್ಪನ್ನಗಳನ್ನೂ ಬಹಿಷ್ಕರಿಸಲಾಗುವುದು ಎಂದು ಹೇಳಿದ್ದಾರೆ.