
ಗಬ್ಬೂರು,ಮೇ.೦೬- ಹುಣ್ಣಿಮೆಯ ಅಂಗವಾಗಿ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ಅಮಾರಪೂರ ಹಳ್ಳದ ಬಸವೇಶ್ವರ ರಥೋತ್ಸವ ಜರುಗಿತು.
ದೇವಸ್ಥಾನದಲ್ಲಿಯ ಮೂರ್ತಿಗೆ ಅಷ್ಟಗಂಧ ಪೂಜೆ ನೆರವೇರಿಸಲಾಯಿತು. ನಂತರ ವಚನ ಪಠಣ ನಡೆಯಿತು. ಬಳಿಕ ದೇವಸ್ಥಾನದಿಂದ ಊರಿನ ಪ್ರಮುಖ ಓಣಿಗಳಲ್ಲಿ ಮೆರವಣಿಗೆ ನಡೆಯಿತು.
ಬುದ್ಧ ಪೂರ್ಣಿಮಾ ಹುಣ್ಣಿಮೆಯ ದಿನದಂದು ಶುಕ್ರವಾರ ಸಂಜೆ ಅದ್ದೂರಿ ರಥೋತ್ಸವ ಅಪಾರ ಭಕ್ತ ಸಮೂಹದೊಂದಿಗೆ ನೆರವೇರಿಸಿದರು.
ರಥೋತ್ಸವ ಸಂದರ್ಭದಲ್ಲಿ ಸೇರಿದ್ದ ಭಕ್ತ ಸಮೂಹ ಹಳ್ಳದ ಬಸವೇಶ್ವರ ಮೂರ್ತಿಗೆ ನಾಮಸ್ಮರಣೆ ಘೋಷಣೆಗೈದರು. ರಥಕ್ಕೆ ಉತ್ತತ್ತಿ,ಮಂಡಕ್ಕಿ,ಬೆಲ್ಲದ ಚೂರು,ಬಾಳೆಹಣ್ಣು ಎಸೆದು ಭಕ್ತಿಯಿಂದ ಬೇಡಿದರು. ಇತ್ತೀಚೆಗೆ ವಿವಾಹ ಬಂಧನಕ್ಕೊಳಗಾದ ನವ ಜೋಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಥ ನೋಡಲು ಆಗಮಿಸಿದ್ದು ಕಂಡು ಬಂದಿತಲ್ಲದೇ ಜಾತ್ರೆಯ ವಿಶೇಷ ಮಂಡಕ್ಕಿ, ಮಿರ್ಚಿ, ಜಿಲೇಬಿ ಸವಿದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.