ರಾಯಚೂರು, ಜೂ.೨4-ಅಕ್ರಮ ಮರಳು ದಂಧೆಯಲ್ಲಿ ತೊಡಗಿದ ಜೆಸಿಬಿ ನಿರ್ಲಕ್ಷ್ಯದಿಂದ ಮೂವರು ಅಮಾಯಕರು ಬಲಿಯಾಗಿದ್ದು ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕನ್ನಡಿಗರ ರಕ್ಷಣಾ ಸಂಘ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸಮೀಪ ನಿಲವಂಜಿ ಗ್ರಾಮದಲ್ಲಿ ಇತ್ತೀಚೆಗೆ ರಾತ್ರಿ ಕೊಳವೆಬಾವಿ ಕೊರೆಯುವ ಕೆಲಸ ಮಾಡುವ ಛತ್ತೀಸ್‌ಗಢ ರಾಜ್ಯದ ಮೂರು ಜನ ಅಮಾಯಕ ಕಾರ್ಮಿಕರು ಕೃಷ್ಣಾ (೨೫), ಶಿವರಾಂ (೩೦), ಬಲರಾಮ್(೨೮) ರಾತ್ರಿ ನಿದ್ರೆಯಲ್ಲಿ ಮರಗಿರುವಾಗ ಅವರ ಮೇಲೆ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ ಜೆ.ಸಿ.ಬಿ, ಯಂತ್ರ ಇವರ ಮೇಲೆ ಹರಿದು ಸ್ಥಳದಲ್ಲಿಯೇ ನಜ್ಜುಗುಜ್ಜು ಮಾಡಿ ಜೀವ ತೆಗೆದಿರುವುದು ಹೃದಯವಿದ್ರಾವಕ ಘಟನೆ ನಡೆದಿದೆ ಎಂದು ದೂರಿದರು.
ಈ ಘಟನೆಗೆ ಪ್ರಮುಖ ಕಾರಣ ರಾತ್ರಿ ಸಮಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಧಂದೆಯಾಗಿದೆ. ಈ ಅಕ್ರಮ ಮರಳು ಧಂದೆಗೆ ಕುಮ್ಮಕ್ಕು ನೀಡುತ್ತಿರುವ ಸರ್ಕಾರಿ ಅಧಿಕಾರಿಗಳು ಕೂಡ ತಪ್ಪಿತಸ್ಥರಾಗಿದ್ದಾರೆ. ಹಗಲು-ರಾತ್ರಿ ಜಿಲ್ಲೆಯಾದ್ಯಂತ ಅಕ್ರಮ ಮರಳು ದಂಧೆಯು ವರ್ಷದಲ್ಲಿ ೧೨ ತಿಂಗಳು ಸರ್ಕಾರದ ಪರವಾನಿಗೆ ಇಲ್ಲದೇ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ದೂರಿದರು.
ಘಟನೆಗೆ ಕಾರಣಭೂತರಾದ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಸತ್ತವರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಿಸಬೇಕು ಹಾಗೂ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳನ್ನು ತಕ್ಷಣವೇ ಶಿಸ್ತು ಕ್ರಮ ತೆಗೆದುಕೊಂಡು ವಜಾ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸೈಯದ್ ಫಾರೂಕ್ ಖಾಜಿಗೌಡ, ಫಾತೀಮಾ ಹುಸೇನ್, ರವಿಕುಮಾರ ಗಬೂರ, ಇಮ್ರಾನ್ ಬಡೇಸಾಬ್ ಸೇರಿದಂತೆ ಉಪಸ್ಥಿತರಿದ್ದರು.