ಅಮಲು ಬರಿಸುವ ಕೇಕ್ ತಿನ್ನಿಸಿ ಅತ್ಯಾಚಾರ


ಬೆಂಗಳೂರು,ಡಿ.೨೫- ಕೆಲಸ ಕೊಡಿಸುವ ನೆಪದಲ್ಲಿ ಅಮಲು ಬರುವ ಕೇಕ್ ತಿನ್ನಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಯುವಕನೊಬ್ಬನನ್ನು ಚಂದ್ರಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಅನ್ ಲೈನ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಸಾಗರ್ ಗೌಡ ಬಂಧಿತ ಆರೋಪಿಯಾಗಿದ್ದಾನೆ.
ಯುವತಿಯ ಮೇಲೆ ಅತ್ಯಾಚಾರವೆಸಗಿ, ವಿಡಿಯೋ ಚಿತ್ರೀಕರಣ ಮಾಡಿದ ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಹಣವನ್ನು ಆರೋಪಿಯು ಸುಲಿಗೆ ಮಾಡಿದ್ದಾನೆ. , ಸಂತ್ರಸ್ತ ಯುವತಿಯ ಸಂಬಂಧಿಯ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಆರೋಪಿ ಸಾಗರ್ ಪರಿಚಯವಾಗಿದ್ದು ಮೊದಲೇ ಕೆಲಸ ಹುಡುಕುತ್ತಿದ್ದ ಯುವತಿಗೆ ಶೈಕ್ಷಣಿಕ ದಾಖಲಾತಿಗಳನ್ನು ತೆಗೆದುಕೊಂಡು ಬಂದರೆ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ. ಆತನನನ್ನು ನಂಬಿದ ಯುವತಿಯು ಶೈಕ್ಷಣಿಕ ದಾಖಲಾತಿಗಳನ್ನು ತೆಗೆದುಕೊಂಡು ಆತನ ಜತೆಯಲ್ಲಿ ಹೋಗಿದ್ದಾಳೆ. ಆದರೆ, ಆರೋಪಿ ಮೊದಲು ಸಂಬಂಧಿಕರ ಮನೆಗೆ ಕರೆದೊಯ್ದಿದ್ದಾನೆ. ಬಳಿಕ ಕೇಕ್?ನಲ್ಲಿ ಮತ್ತು ಬರುವ ಪೌಡರ್ ಹಾಕಿ, ಅಕ್ಕನ ಮಗನ ಹುಟ್ಟುಹಬ್ಬದ ಕೇಕ್ ಎಂದು ತಿನ್ನಿಸಿದ್ದಾನೆ. ಬಳಿಕ ಪ್ರಜ್ಞೆ ತಪ್ಪಿದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ.
ಎಲ್ಲಿ ಯುವತಿ ಪೊಲೀಸರಿಗೆ ದೂರು ನೀಡುತ್ತಾಳೋ ಎಂಬ ಭಯದಲ್ಲಿ ಮದುವೆ ಯಾಗುವ ನಾಟಕವಾಡಿದ್ದಾನೆ.
ಆತಂಕಕಾರಿ ವಿಚಾರವೆಂದರೆ ಮೋಸ ಹೋದ ಸಂತ್ರಸ್ತ ಯುವತಿಯು ಆರೋಪಿಗೆ ೨೭ನೇಯವಳಂತೆ. ತನ್ನ ಮೇಲಿನ ದೌರ್ಜನ್ಯದ ಬಗ್ಗೆ ಯುವತಿ, ಮಂಡ್ಯದ ಮಳವಳ್ಳಿ ಬಳಿಯಿರುವ ಆರೋಪಿ ಸಾಗರ್ ಪೋಷಕರಿಗೆ ತಿಳಿಸಿದರೆ, ಅವರಿಂದ ಬಂದ ಉತ್ತರ ಕೇಳಿ ಆಘಾತಕ್ಕೊಳಗಾಗಿದ್ದಾಳೆ.
ನೀನು ನನ್ನ ಮಗನಿಗೆ ೨೭ನೇಯವಳು. ನಿನಗೂ ಮೊದಲು ಇಪ್ಪತೈದು- ಇಪ್ಪತ್ತಾರು ಜನ ಹುಡುಗಿಯರ ಜೀವನವನ್ನು ನನ್ನ ಮಗ ಹಾಳು ಮಾಡಿದ್ದಾನೆ.
ಅವರಿಗೆಲ್ಲ ಮೊದಲು ನ್ಯಾಯ ಕೊಡಿಸಿ, ಆಮೇಲೆ ನಿನಗೆ ಮದುವೆ ಮಾಡಿಸುವೆ ಎಂದು ಆರೋಪಿಯ ತಂದೆ ಹೇಳಿದ್ದು ಆತಂಕಗೊಂಡ ಯುವತಿಯು ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಸಾಗರ್ ಗೌಡನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.