ಅಮರೇಶ್ವರ ಜಾತ್ರೆಗೆ ಹರಿದು ಬರುತ್ತಿದೆ ಜನ ಸಾಗರ ಪಟ್ಟಣದಾದ್ಯಂತ ದೀಪಾಲಂಕಾರ ಸ್ವಾಗತ ಕಮಾನುಗಳು ಭಕ್ತರನ್ನು ಆಕರ್ಷಿಸುತ್ತಿದೆ

( ಅಮರಸ್ವಾಮಿ ಸ್ಥಾವರಮಠ)
ಔರಾದ :ಮಾ.8: ಭಕ್ತರ ಬದುಕಿನಲ್ಲಿ ಶ್ರೀ ಅಮರೇಶ್ವರ ಜಾತ್ರೆ ವಿಶೇಷ ಸ್ಥಾನ ಹೊಂದಿದೆ. ಇಲ್ಲಿನ ಜಾತ್ರೆಯೆಂದರೆ ಅದೊಂದು ಬಗೆಯ ಯಾತ್ರೆಯ ಹೌದು. ಕೇವಲ ಒಂದು ರಥ, ಒಂದು ವಿಗ್ರಹ, ಪೂಜೆ, ಒಂದಿಷ್ಟು ಖರೀದಿ, ಸಿಹಿ ತಿನಿಸುಗಳ ಮೇಳವಷ್ಟೇ ಇಲ್ಲಿರುವುದಿಲ್ಲ. ಜಾತ್ರೆಯಲ್ಲಿ ಪಶು ಮೇಳ, ನಾಟಕ ಪ್ರದರ್ಶನ, ಎಲ್ಲಿ ನೋಡಿದರು ಕಾಣ ಸಿಗುವ ಭಕ್ತ ಸಾಗರ ನೋಡುವ ಕಣ್ಣುಗಳಿಗೆ ವಿಶೇಷ ಅನುಭವ ಕಟ್ಟಿಕೊಡುತ್ತದೆ.

ಪ್ರತಿ ವರ್ಷ ಮಹಾ ಶಿವರಾತ್ರಿ ಸಂಧರ್ಭದಲ್ಲಿ ನಡೆಯುವ ಉದ್ಭವಲಿಂಗ ಶ್ರೀ ಅಮರೇಶ್ವರ ಜಾತ್ರೆಗೆ ಭಕ್ತ ಸಾಗರವೇ ಹರಿದು ಬರುತ್ತಿದೆ. ನೆರೆಯ ಮಹಾರಾಷ್ಟ್ರ ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ನಾನಾ ಕಡೆಯ ಭಕ್ತರು ಅಮರೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ವಲಸೆ ಹೋದ ಯುವಕರು ಜಾತ್ರೆಗೆ ಮರಳಿ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಅನ್ನ ಪ್ರಸಾದ, ಮಜ್ಜಿಗೆ ಪಾನಕ, ಪ್ರಸಾದ ವಿನಿಯೋಗ ಮಾಡಿ ತನ್ನ ಸೇವೆ ಸಲ್ಲಿಸುತ್ತಾರೆ.

ಸತತ ಒಂದು ವಾರಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ದಿನಾಲು ಅಮರೇಶ್ವರರ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಪಟ್ಟಣದ ವಿವಿಧ ಬಡಾವಣೆಗಳ ಮೂಲಕ ಬಾಜಾ ಭಜಂತ್ರಿಯೊಂದಿಗೆ ಭಕ್ತರ ಸಮ್ಮುಖದಲ್ಲಿ ಅಮರೇಶ್ವರ ಭಕ್ತರ ಮನೆಗೆ ತೆರಳುತ್ತಾರೆ. ಪ್ರತಿ ಮನೆಯ ಮುಂದೆ ತಾಯಂದಿರು ರಂಗೋಲಿ ದೀಪಾಲಂಕಾರ ಮಾಡಿ ದೇವರಿಗೆ ಸ್ವಾಗತ ಕೋರುತ್ತಾರೆ. ನಂತರ ವಿಶೇಷ ಪೂಜೆ ಸಲ್ಲಿಸಿ ಹೊದಿಕೆ ಅರ್ಪಿಸಿ ಇಷ್ಟಾರ್ಥ ಪೆÇೀರೈಸುವ ದೇವರಿಗೆ ಆರತಿ ಬೆಳಗಿ ಭಕ್ತಿ ಸಮರ್ಪಣೆ ಮಾಡುತ್ತಾರೆ.

ಸತತ ಐದು ದಿನಗಳ ಕಾಲ ದೇವರ ಮೆರವಣಿಗೆ ನಡೆಯುತ್ತದೆ. ನಾಲ್ಕನೇ ದಿನಕ್ಕೆ ಅಮರೇಶ್ವರ ದೇವರು ಅಗ್ನಿ ತುಳಿದ ಮೇಲೆ ಎಲ್ಲ ಭಕ್ತರು ಅಗ್ನಿ ತುಳಿದು ಪಾವನವಾಗುತ್ತಾರೆ. ಐದನೇ ದಿನ ಶ್ರಿ ಉದ್ಭವಲಿಂಗ ಅಮರೇಶ್ವರ ರಥೋತ್ಸವ ಸಹಸ್ರಾರು ಭಕ್ತಸಾಗರದ ಮಧ್ಯೆ ಜರುಗುತ್ತದೆ. ಔರಾದ ತಾಲ್ಲೂಕಿನಲ್ಲಿ ಅಮರೇಶ್ವರ ಜಾತ್ರೆ ಬಂತು ಎಂದರೆ ಎಲ್ಲರ ಮನೆಯಲ್ಲಿ ಹಬ್ಬದ ವಾತಾವರಣ ಎಲ್ಲರ ಮನೆಯ ಹೆಣ್ಣು ಮಕ್ಕಳು ತವರಿಗೆ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ರಥೋತ್ಸವ ದಿನ ಜಯಘೋಷಗಳ ನಡುವೆ ಶ್ರೀ ಅಮರೇಶ್ವರರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸುತ್ತಾರೆ. ಮಂತ್ರಗಳ ವೇದಘೋಷ, ವಿವಿಧ ಬಗೆಯ ವಾದ್ಯ ಮೇಳಗಳೊಂದಿಗೆ ಪೂಜೆ ಸಲ್ಲಿಕೆಯಾಗುತ್ತದೆ. ಎಲ್ಲ ಭಕ್ತರು ರಥೋತ್ಸವ ಎಳೆದು ಪಾವನವಾಗುತ್ತಾರೆ.


ಕಾಶಿ ಮಾದರಿಯ ಉದ್ಭವಲಿಂಗ

ಇಲ್ಲಿನ ಅಮರೇಶ್ವರ ದೇಗುಲ 10 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸದ ಮೂಲಕ ತಿಳಿದು ಬಂದಿದೆ. ಈ ದೇವಾಲಯದಲ್ಲಿ 11ನೇ ಶತಮಾನದ ಚಾಲುಕ್ಯರ ಕಾಲದ ಕನ್ನಡ ಮತ್ತು ಉರ್ದು ಭಾಷೆಯ ಶಾಸನಗಳು ದೊರೆತಿವೆ. ಹೀಗಾಗಿ ಇದು ಧಾರ್ಮಿಕ ಸಮನ್ವಯದ ಪ್ರತೀಕವಾಗಿದೆ ಎಂದು ಶಾಸನದಿಂದ ತಿಳಿದು ಬರುತ್ತದೆ. ದೇವಾಲಯದ ಭರ್ಗಗುಡಿಯಲ್ಲಿ ಕಾಶಿ ಮಾದರಿಯ ಉದ್ಭವ ಲಿಂಗವಿದೆ. ಅಮರೇಶ್ವರ ದೇವರಿಗೆ ಉದ್ಭವ ಲಿಂಗವೆಂದು ಕರೆಯುತ್ತಾರೆ. ಅಮರೇಶ್ವರ ದೇವಾಲಯ ಕಟ್ಟುವಾಗಲೇ ದಕ್ಷಣ ದಿಕ್ಕಿಗೆ ಒಂದು ಕಿ.ಮೀ ಅಂತರದಲ್ಲಿ ನಿರ್ಮಿಸಲಾದ ಪುರಾತನದ ಚಂದನ ಕೆರೆ, ದೇವಾಲಯದ ಉತ್ತರಕ್ಕೆ ಪುರಾತನ ಕಾಲದ ಅಮೃತ ಕುಂಡ ನಿರ್ಮಿಸಲಾಗಿದೆ. ಈ ಕುಂಡದಲ್ಲಿ ಸದಾಕಾಲ ನೀರಿನ ಚಿಲುಮೆ ಕಂಡು ಬರುವುದು ವಿಶೇಷ.


ಒಂಟೆ ಜಾತ್ರೆ ಖ್ಯಾತಿಯ ಔರಾದ ಜಾತ್ರೆ

ರಾಜ್ಯದ ಏಕೈಕ ಒಂಟಿ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದ್ದ ಉದ್ಭವಲಿಂಗ ಶ್ರೀ ಅಮರೇಶ್ವರ ಜಾತ್ರೆಯ ಒಂಟಿ ಪ್ರದರ್ಶನ ನಡೆಯುವದು ಔರಾದ್‍ನಲ್ಲಿ ಇತಿಹಾಸವಿದೆ. 1950ರಲ್ಲಿ ಆರಂಭವಾದ ಅಮರೇಶ್ವರ ಜಾತ್ರೆ ಇಡೀ ದೇಶದ ಗಮನ ಸೆಳೆದಿದೆ. ರಾಜಸ್ಥಾನ, ಬಿಹಾರ, ಉತ್ತರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧೆಡೆಯಿಂದ ಔರಾದನಲ್ಲಿ ಒಂಟೆ ವ್ಯಾಪಾರಿಗಳು ಬರುತ್ತಿದ್ದರು. ಒಂದು ತಿಂಗಳ ಕಾಲ ಪಟ್ಟಣದಲ್ಲಿ ಸಾವಿರಾರು ಒಂಟೆಗಳು ಓಡಾಡುತ್ತಿರುವುದು ಜಾತ್ರೆ ಕಳೆ ಕಟ್ಟುತ್ತಿತ್ತು. ದೇಶದಲ್ಲಿಯೇ ಏಕೈಕ ಒಂಟೆಯ ಜಾತ್ರೆ ಎಂದು ಗಮನ ಸೆಳೆದ ಶ್ರೀ ಅಮರೇಶ್ವರ ಜಾತ್ರೆ ಈದೀಗ ಮರಿಚೀಕೆಯಾಗಿದೆ ಎಂದು ಭಕ್ತಾದಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


ಅಮರವಾಡಿಯಿಂದ ಔರಾದ

ಉದ್ಭವಲಿಂಗ ಅಮರೇಶ್ವರ ದೇವರ ಅಸ್ತಿತ್ವ ಮಾತ್ರದಿಂದಲೇ ಇಂದಿನ ಔರಾದ ಎನ್ನುವ ಹೆಸರು ಈ ಹಿಂದೆ ಅಮರೇಶ್ವರವಾಡಿ, ಅಮರವಾಡಿ, ಅವರವಾಡಿ, ಅವರಾಡಿ, ಅವರಾದ, ಔರಾದ ಎಂದು ಬದಲಾಗಿದೆ ಎಂಬುದು ಅಮರೇಶ್ವರ ದೇವಸ್ಥಾನದಲ್ಲಿ ದೊರೆತ ತುಂಡು ಶಾಸನ ಹಾಗೂ ಅಮರೇಶ್ವರ ಕಾಲೇಜು ಆವರಣದಲ್ಲಿರುವ ಪಾಶ್ರ್ವನಾಥ ತೀಥರ್ಂಕರರ ಒಡೆದ ಶಾಸನದ ಪೀಠದ ಕೆಳಗಿರುವ ಎರಡು ಸಾಲಿನ ಶಿಲಾಶಾಸನದಲ್ಲಿ “ವಿಖ್ಯಾತನಗರವರವಾಡಿ” ಎನ್ನುವ ಸಾಲು, ಇಂದಿನ ಔರಾದನ್ನು ‘ಅವರವಾಡಿ’ ಅಥವಾ “ಅಮರವಾಡಿ” ಎನ್ನುತ್ತಿದ್ದರೆಂದು ಪುಷ್ಟಿಕರಿಸುತ್ತದೆ.
ಸುಮಾರು 10ನೇ ಶತಮಾನದ್ದೆನ್ನಬಹುದಾದ ಅಮರೇಶ್ವರ ದೇವಸ್ಥಾನದಲ್ಲಿ ದೊರೆತ ತುಂಡು ಶಾಸನದಲ್ಲೂ “ಅವರವಾಡಿ ನೂರರ ಗ್ರಾಮದ ಸಮಸ್ತ ಪ್ರಭುಗಾವುಂಡರು ಅವರವಾಡಿಯ ಶ್ರೀ ಅಮರೇಶ್ವರ ದೇವರಿಗೆ ಖಂಡಸ್ಪುಟಿತ ಜೀರ್ಣೋದ್ಧಾರಕ್ಕಾಗಿ ತನಾಥರ್ಂ ಧಾರಾಪೂರ್ವಕ ……………” ಎನ್ನುವ ಸಾಲು ಉಲ್ಲೇಖಿಸಲಾಗಿದ್ದು ಇದು ಹಿಂದಿನ ಅಮರವಾಡಿಯೇ ಇಂದಿನ ಔರಾದ್ ಎಂಬುದನ್ನು ಒತ್ತಿ ಹೇಳುತ್ತದೆ.


ಪಲ್ಲಕ್ಕಿ & ಉತ್ಸವ ಮೂರ್ತಿ ಮೂಲಕ ಮನೆ ಮನೆಗೆ ದರ್ಶನ

ಶ್ರೀ ಅಮರೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಸತತ ಐದು ದಿನಗಳ ಕಾಲ ನಡೆಯುವ ಪಲ್ಲಕ್ಕಿ ಉತ್ಸವದಲ್ಲಿ ಉದ್ಭವಲಿಂಗ ಅಮರೇಶ್ವರರು ಉತ್ಸವ ಮೂರ್ತಿಯಾಗಿ ಜನರ ಮನೆ ಬಾಗಿಲಿಗೆ ದರ್ಶನ ನೀಡುತ್ತಾರೆ. ಹೀಗಾಗಿ ಪಟ್ಟಣದ ಹೆಂಗಳೆಯರು ಶ್ರೀ ಅಮರೇಶ್ವರರ ಪಲ್ಲಕ್ಕಿ ಉತ್ಸವ ಬರಮಾಡಿಕೊಳ್ಳಲು ಮನೆ ಮುಂದೆ ಸ್ವಚ್ಛ ಮಾಡಿ ವಿವಿಧ ಬಗೆಯ ರಂಗೋಲಿ ಬಿಡಿಸಿ ಸ್ವಾಗತ ಕೋರುತ್ತಾರೆ, ವಿಶೇಷ ಪೂಜೆ ಹೊದಿಕೆ ಅರ್ಪಿಸಿ ತಮ್ಮ ಹರಕೆ ತಿರಿಸುತ್ತಾರೆ, ಪಲ್ಲಕ್ಕಿ ಉತ್ಸವ ನೋಡುವುದೆ ಕಣ್ಣಿಗೆ ಹಬ್ಬ.