ಅಮರಾವತಿ ಶಾಲೆ ಮಕ್ಕಳಿಂದ ವಿವಿಧ ಪ್ರಯೋಗಗಳು ಪ್ರದರ್ಶನ

ಮಾನ್ವಿ,ಮಾ.೦೧- ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲೆಗಳಲ್ಲಿ ತಯಾರಿಸುವ ವಿಜ್ಞಾನ ವಸ್ತು ಮಾದರಿಗಳಿಂದ ವಿನೋದದ ಮೂಲಕವೇ ವಿಜ್ಞಾನದ ಕಡೆಗೆ ಮಕ್ಕಳ ಜ್ಞಾನವು ವೃದ್ಧಿಸುತ್ತದೆ ಎಂದು ಬಿ.ಆರ್.ಪಿ. ಸತೀಶ್ ಕುಮಾರ್ ಹೇಳಿದರು.
ತಾಲೂಕಿನ ಅಮರಾವತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ದಿನಾಚರಣೆಯ ಈ ವರ್ಷದ ಧ್ಯೇಯ ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ ವಾಕ್ಯವು ಪ್ರಮುಖವಾಗಿದೆ. ನಂದಿನಿ ಹರಿನಾಥ, ರಿತು ಕರಿದಾಳ ಅವರಂತಹ ಮಹಿಳಾ ವಿಜ್ಞಾನಿಗಳು ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಭಾರತದ ಮಹಾನ್ ವಿಜ್ಞಾನಿ ಸಿ.ವಿ.ರಾಮನ್ ಅವರು ಫೆ. ೨೮ ರ ೧೯೨೮ ರಲ್ಲಿ ಬೆಳಕಿನ ಪರಿಣಾಮವನ್ನು ಕಂಡುಹಿಡಿದ ದಿನದ ಸ್ಮರಣೆಗಾಗಿ ಈ ದಿನವನ್ನು ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ. ಬರಿಗಣ್ಣಿಗೆ ಕಾಣುವ ಬೆಳಕು ಬಿಳಿಯಾಗಿದ್ದರೂ ಅದರಲ್ಲಿ ಏಳು ಬಣ್ಣಗಳು ಇರುತ್ತವೆ ಎಂಬುದನ್ನು ಪ್ರಯೋಗದಿಂದ ತೋರಿಸಿದ್ದರು ಎಂದು ತಿಳಿಸಿದರು.
೧೯೩೦ ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿ ರಾಮನ್ ಅವರು ರಾಮನ್ ಪರಿಣಾಮದ ಆವಿಷ್ಕಾರವನ್ನು ಗೌರವಿಸಲು ಫೆ.೨೮ ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ದೇಶದಾದ್ಯಂತ ವಿಷಯಾಧಾರಿತ ವಿಜ್ಞಾನ ಸಂವಹನ ಚಟುವಟಿಕೆಗಳು ನಡೆಯಲಿವೆ. ಈ ಚಟುವಟಿಕೆಗಳು ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಜಾಗತಿಕ ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ವಿಜ್ಞಾನದ ಪಾತ್ರದ ಬಗ್ಗೆ ಸಾರ್ವಜನಿಕರ ಮೆಚ್ಚುಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ ಎಂದು ಬಿ.ಆರ್.ಪಿ ಸತೀಶ್ ಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸಂಜೀವಮ್ಮ, ಸಹ ಶಿಕ್ಷಕರಾದ ಕುಮಾರ್ ದೊಡ್ಡಬಸಪ್ಪನವರ್, ಕಿರಣ್ ಕುಮಾರ್, ಬಸವರಾಜ, ರಾಘವೇಂದ್ರ, ಲಕ್ಷ್ಮೀ, ಲಕ್ಷ್ಮೀದೇವಿ, ಅತಿಥಿ ಶಿಕ್ಷಕಿ ಗಂಗಮ್ಮ ಉಪಸ್ಥಿತರಿದ್ದರು.