ಅಮರಶಿಲ್ಪಿ ಜಕಣಾಚಾರಿ ಜಯಂತಿ: ಸರಳ ಆಚರಣೆ

ಚಿತ್ರದುರ್ಗ, ಜನವರಿ 01: ವಿಶ್ವವಿಖ್ಯಾತ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮವನ್ನು ಕೋವಿಡ್-19 ಹಿನ್ನಲೆಯಲ್ಲಿ ಸರಳವಾಗಿ ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ ಅವರು ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವ ನಮನ ಸಲ್ಲಿಸಿದರು.ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಕೋವಿಡ್-19 ಹಿನ್ನಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಮಹನೀಯರ ವಿಚಾರಧಾರೆಗಳನ್ನು, ಅವರ ಸಾಧನೆಗಳನ್ನು, ದೇಶಕ್ಕೆ ಅವರು ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದೆ ಎಂದರು.ಬೇಲೂರು, ಹಳೇಬೀಡು ಸೇರಿದಂತೆ ಕರ್ನಾಟಕದ ವೈಭವವನ್ನು ಪ್ರಪಂಚದಾದ್ಯಂತ ಅಮರ ಶಿಲ್ಪ ಜಕಣಾಚಾರಿ ಅವರು ಸಾರಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ನಾಡಗೀತೆಯಲ್ಲಿ ಜಕಣಾಚಾರಿ ಅವರ ಹೆಸರನ್ನು ಸೇರಿಸಿದ್ದಾರೆ. ಅವರಿಗೆ ಅಷ್ಟೋಂದು ಮಹತ್ವ ಸಿಕ್ಕಿದೆ ಎಂದರು.
ಶಿಲ್ಪಿ ಸಿ.ಆರ್.ಸುರೇಶ ಮಾತನಾಡಿ, ಧಾರ್ಮಿಕ ತಳಹದಿಯ ಮೇಲೆ ನಮ್ಮ ದೇಶದ ಸಂಸ್ಕøತಿ ನಿಂತಿದೆ. ಪ್ರಕೃತಿಯನ್ನು ದೇವರನ್ನಾಗಿ ಪೂಜಿಸಲಾಗುತ್ತಿದೆ. ಪ್ರಕೃತಿಯಲ್ಲಿರುವ ಕಲ್ಲು, ಮಣ್ಣು, ಮರದಲ್ಲಿ ದೈವತ್ವದ ಸಕಾರರೂಪವನ್ನು ಕೊಟ್ಟವರು ಶಿಲ್ಪಿಗಳು ಎಂದರು.
ಜಕಣಾಚಾರಿ ಅವರನ್ನು ಅಮರಶಿಲ್ಪ ಎಂದು ಕರೆಯಲಾಗುತ್ತಿದೆ. ಜೋತಿಷ್ಯ, ವಾಸ್ತುವಾಸ್ತ್ರ, ರಸ ವಿದ್ಯೆಯ ಕಲೆಗಳನ್ನು ಹೊಂದಿದ್ದರು. ಅನೇಕ ಶಿಲ್ಪಶಾಸ್ತ್ರಗಳನ್ನು ರಚನೆ ಮಾಡಿದ್ದಾರೆ ಹೀಗೆ ಅವರು ನಿಸ್ವಾರ್ಥದಿಂದ ಕಲಾ ಸೇವೆಯನ್ನು ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.ಇಂತಹ ಶಿಲ್ಪಕಲೆ, ವಾಸ್ತುಶಿಲ್ಪವನ್ನು ವಿಶ್ವಕರ್ಮ ಸಮಾಜ ಉಳಿಸಿ, ಬೆಳೆಸಿಕೊಂಡು ಬಂದಿದೆ. ಸರ್ಕಾರದ ವತಿಯಿಂದ ಜಕಣಾಚಾರಿ ಅವರ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಿಜಲಿಂಗಪ್ಪ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಹಾಗೂ ವಿಶ್ವಕರ್ಮ ಸಮಾಜದ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಫೋಟೋವಿವರ: ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ ಅವರು ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದರು.