ಅಮರನಾಥ ಯಾತ್ರೆ ಸ್ಥಗಿತ: ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಕಾಶ್ಮೀರ,ಜು.೮- ಭಾರೀ ಹಿಮ ಮತ್ತು ಮಳೆಯಿಂದಾಗಿ ಅಮರನಾಥ ಯಾತ್ರೆಗೆ ತೆರಳಿದ ಯಾತ್ರಾರ್ಥಿಗಳ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದ ೪೮ ಗಂಟೆಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ ೯ಕ್ಕೆ ಏರಿಕೆಯಾಗಿದೆ.
ಮೃತರ ವಿವರಗಳನ್ನು ಮತ್ತು ಸಾವಿನ ಕಾರಣವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಆದರೆ ಪರ್ವತದಲ್ಲಿ ಕಡಿಮೆ ಆಮ್ಲಜನಕದ ಸಾಂದ್ರತೆಯಿಂದ ಪ್ರಚೋದಿಸಲ್ಪಟ್ಟ ಹೃದಯ ಸ್ತಂಭನದಿಂದಾಗಿ ಅಮರನಾಥ ಯಾತ್ರಿಕರು ಸಾವನ್ನಪ್ಪುತ್ತಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಹವಾಮಾನ ವೈಪರೀತ್ಯದಿಂದ ನಿರಂತರವಾಗಿ ಹಿಮ ಮತ್ತು ಮಳೆ ಬೀಳುತ್ತಿದ್ದು, ಇನ್ನೆರಡು ದಿನ ಮಳೆಯಾಗುವ ಮುನ್ಸೂಚನೆ ಇದೆ. ಈ ಹಿನ್ನೆಲೆ ಅಮರನಾಥ ಯಾತ್ರೆಗೆ ಅನುಕೂಲಕರ ವಾತಾವರಣ ಇಲ್ಲದ ಕಾರಣ ಅಧಿಕಾರಿಗಳು ಯಾತ್ರೆ ಸ್ಥಗಿತಗೊಳಿಸಿದ್ದಾರೆ.
ಈ ಬಾರಿ ಪ್ರವಾಸದ ವೇಳೆ ಕ್ಲೌಡ್ ಬರ್ಸ್ಟ್ ಮೆಕ್ಯಾನಿಸಂ ಕಂಡುಬಂದಿದ್ದು, ಏಕಾಏಕಿ ಭಾರಿ ಮಳೆಯಾಗಿ ಪ್ರವಾಹ ಉಂಟಾಗಿದೆ. ಹಿಮಭರಿತ ಪರ್ವತಗಳಿಂದ ಕಾಲಕಾಲಕ್ಕೆ ಬಂಡೆಗಳು ಬೀಳುವ ಸಾಧ್ಯತೆ ಇದೆ. ಇದರ ಜೊತೆಗೆ ಭಯೋತ್ಪಾದಕ ದಾಳಿಯ ಅಪಾಯವಿದ್ದು, ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಪ್ರವಾಸವನ್ನು ನಿಲ್ಲಿಸಲಾಗಿದೆ.
ಹವಾಮಾನ ಸಹಜ ಸ್ಥಿತಿಗೆ ಮರಳಿದ ನಂತರ ಪ್ರವಾಸ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರವಾಸವು ಆಗಸ್ಟ್ ೩೧ ರವರೆಗೆ ಇರುತ್ತದೆ. ಈ ವರ್ಷ ಇದುವರೆಗೆ ೮೦ ಸಾವಿರಕ್ಕೂ ಹೆಚ್ಚು ಮಂದಿ ಅಮರನಾಥ ಶಿವಲಿಂಗಕ್ಕೆ ಭೇಟಿ ನೀಡಿದ್ದಾರೆ.