ಅಮರನಾಥ ಯಾತ್ರೆ ಪುನರಾರಂಭ

ಜಮ್ಮು , ಜು.11- ಪ್ರತಿಕೂಲ ಹವಾಮಾನ ಮತ್ತು ಮೇಘಸ್ಫೋಟ ದಿಂದಾಗಿ ಮೂರು ದಿನ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ‌ ಇಂದು ಮತ್ತೆ ಆರಂಭಗೊಂಡಿದೆ.
ಪವಿತ್ರ ಗುಹೆಯ ಮಾರ್ಗವನ್ನು ತೆರವುಗೊಳಿಸಿದ ನಂತರ 4,026 ಯಾತ್ರಿಕರ ಹೊಸ ತಂಡವು ಜಮ್ಮು ಮೂಲ ಶಿಬಿರದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದೆ.
ಅಮರನಾಥ ಲಿಂಗ ಗುಹೆ ಮತ್ತು ಸುತ್ತಮುತ್ತಲಿನ ಪ್ರದೇಶದ ಇತ್ತೀಚಿನ ಎಲ್ಲಾ ಭಗ್ನಾವಶೇಷಗಳನ್ನು ತೆರವುಗೊಳಿಸಲಾಗಿದೆ ಮತ್ತು ತಾಜಾ ಬ್ಯಾಚ್ ಭಕ್ತರಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿರಲು ಮಾರ್ಗವನ್ನು ಸಿದ್ದಪಡಿಸಲಾಗಿದೆ.
ಮೇಘಸ್ಫೋಟದಿಂದಾಗಿ ಶಿವನ ಪವಿತ್ರ ಗುಹೆಯ ಸುತ್ತಲಿನ ಪ್ರದೇಶವನ್ನು ಪ್ರವಾಹಕ್ಕೆ ಸಿಲುಕಿ ಕೆಲವು ಶಿಬಿರಗಳು ಸಹ ಕೊಚ್ಚಿಹೋಗಿ ಕೆಲವು ಭಕ್ತರು ಪ್ರಾಣ ಕಳೆದುಕೊಂಡಿದ್ದರು.
ಇತ್ತೀಚಿನ ವರದಿಗಳ ಪ್ರಕಾರ, ಕೆಲ ಯಾತ್ರಿಗಳು ಇನ್ನೂ ಕಾಣೆಯಾಗಿದ್ದು, ಅವರನ್ನು ಹುಡುಕುವ ಪ್ರಯತ್ನಗಳು ಭರದಿಂದ ಸಾಗುತ್ತಿದೆ. ಸೇನಾ ಪಡೆಗಳು, ಅರೆಸೇನಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.