ಅಮರನಾಥ ಯಾತ್ರೆ ಜು.1 ರಿಂದ ಆರಂಭ: ಭದ್ರತೆಗೆ 60 ಸಾವಿರ ಸಿಬ್ಬಂದಿ ನಿಯೋಜನೆ

ಶ್ರೀನಗರ,ಜೂ.13- ಜಮ್ಮು- ಕಾಶ್ಮೀರದ ಪವಿತ್ರ ಧಾರ್ಮಿಕ ಕ್ಷೇತ್ರವಾದ ಅಮರ್‍ನಾಥ ಯಾತ್ರೆಯ 62 ದಿನಗಳ ಪ್ರಯಾಣ ಜುಲೈ 1 ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಕಣಿವೆ ಪ್ರದೇಶದಲ್ಲಿ ವ್ಯಾಪಕ ಬಿಗಿಭದ್ರತೆ ಒದಗಿಸಲಾಗಿದೆ.

ಯಾತ್ರಾರ್ಥಿಗಳ ರಕ್ಷಣೆಗೆಂದೇ ಸರಿಸುಮಾರು 60 ಸಾವಿರಕ್ಕೂ ಹೆಚ್ಚು ಭದ್ರತಾಪಡೆ ಮತ್ತು ಅರೆಸೇನಾಪಡೆಗಳನ್ನು ಜಮ್ಮು-ಕಾಶ್ಮೀರದ ಲಖನ್‍ಪುರ್‍ ನಿಂದ ಹಿಮಲಿಂಗದ ದರ್ಶನಪಡೆಯುವ ಗುಹೆಯತನಕ ಭಾರೀ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಕೇಂದ್ರೀಯ ಮೀಸಲು ಪೊಲೀಸ್‍ಪಡೆಯ ಸಿಬ್ಬಂದಿಗಳನ್ನೂ ಹೆಚ್ಚುವರಿಯಾಗಿ ನಿಯೋಜಿಸಿದ್ದು, ಜೂನ್ 20ರ ಒಳಗಾಗಿ ತಮಗೆ ನಿಯೋಜಿಸಿದ ಸ್ಥಳಗಳಿಗೆ ತಲುಪುವ ಸಾಧ್ಯತೆಗಳಿವೆ.

ಪವಿತ್ರ ಗುಹೆಯ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಾದ ಬಲ್‍ತಲ್, ಪಹಲ್‍ಗಾಮ್‍ನಲ್ಲಿ ಐಟಿಬಿಪಿ, ಬಿಎಸ್‍ಎಫ್, ಎಸ್‍ಎಸ್‍ಎಫ್ ಮತ್ತು ಸಿಎಸ್‍ಎಫ್ ಕಂಪನಿಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

ಲಖನ್‍ಪುರಿಯಿಂದ ಅಮರ್‍ ನಾಥ್ ಗುಹೆಯ ತನಕ ಭಾರೀ ಬಿಗಿಭದ್ರತೆ ಒದಗಿಸಲಾಗಿದ್ದು, ಯಾತ್ರಾರ್ಥಿಗಳ ಸುಗಮ ಪ್ರಯಾಣಕ್ಕೆ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ

ಶಾರ್ಪ್ ಶೂಟರ್ ನೇಮಕ:.

ಯಾತ್ರೆಯ ಪ್ರಮುಖ ಸ್ಥಳಗಳಲ್ಲಿ ತೀಕ್ಷ್ಣ ಗುರಿಕಾರರು ಹಾಗೂ ಶಾರ್ಪ್ ಶೂಟರ್‍ ಗಳನ್ನು ನಿಯೋಜಿಸಲಾಗಿದ್ದು, ಅಮರ್‍ನಾಥ ಯಾತ್ರಾರ್ಥಿಗಳಿಗೆ ಎಸ್ಕಾರ್ಟ್ ಮಾಡಲು ನಿರ್ಧರಿಸಲಾಗಿದೆ.

ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ಭದ್ರತಾ ಪ್ರದೇಶದ ಗಡಿ ನಿಯಂತ್ರಣದ ರೇಖೆಯ ಬಳಿ ವ್ಯಾಪಕ ಬಿಗಿಭದ್ರತೆಯನ್ನು ಒದಗಿಸಲಾಗಿದೆ.

ಈ ಮಧ್ಯೆ ಕೇಂದ್ರಾಡಳಿತ ಪ್ರದೇಶದ ಆಡಳಿತ ಐದು ತತ್ಕಾಲ್ ನೋಂದಣಿ ಕೇಂದ್ರಗಳನ್ನು ಜಮ್ಮುವಿನ ಕಡೆ ಆರಂಭಿಸಿದೆ. ಈ ತತ್ಕಾಲ್ ನೋಂದಣಿ ಕೇಂದ್ರಗಳು ವೈಷ್ಣವಿಧಾಮ್, ಮಹಾಜನ್‍ಸಭಾ, ಪಂಚಾಯತ್‍ಘರ್‍ನಲ್ಲಿ ಸ್ಥಾಪಿಸಲಾಗಿದ್ದು, ಸಾಧುಗಳಿಗಾಗಿಯೇ ಗೀತಾಭವನ್, ರಾಮಮಂದಿರದಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಇದರ ಜೊತೆಗೆ ಆನ್‍ಲೈನ್ ಮೂಲಕ ಹೆಲಿಕಾಪ್ಟರ್ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಈ ವಾರದಿಂದ ಆರಂಭಿಸಲು ನಿರ್ಧರಿಸಲಾಗಿದೆ.

ಈ ಬುಕ್ಕಿಂಗ್‍ಗಳು ಬಲ್‍ತಲ್, ಪಹಲ್‍ಗಾಮ್, ಶ್ರೀನಗರ ಮಾರ್ಗದಲ್ಲಿ ಹೆಲಿಕಾಪ್ಟರ್ ಮೂಲಕ ಯಾತ್ರಾರ್ಥಿಗಳನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಸರಿಸುಮಾರು 4 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಅಮರ್‍ನಾಥ ದರ್ಶನ ಪಡೆಯುವ ಸಾಧ್ಯತೆಗಳಿವೆ.

ಜಮ್ಮು- ಕಾಶ್ಮೀರ ಸರ್ಕಾರ ತನ್ನ ಪ್ರಮುಖ ಪ್ರವಾಸಿ ತಾಣಗಳಿಗೂ ಪ್ರವಾಸಿಗರನ್ನು ಆಕರ್ಷಿಸಲು ಹಲವು ಯೋಜನೆಗಳನ್ನು ಕೈಗೊಂಡಿದೆ. ಇದುವರೆಗೂ ಆನ್‍ಲೈನ್ ಮೂಲಕ 3 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.