ನವದೆಹಲಿ,ಜು.೯:ಜಮ್ಮು-ಕಾಶ್ಮೀರ ಸೇರಿದಂತೆ ಉತ್ತರ ಭಾಗದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಪವಿತ್ರ ಅಮರನಾಥಯಾತ್ರೆಗೆ ಹೋಗಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣಾ ಕಾರ್ಯ ನಡೆದಿದ್ದು, ಇಂದು ಬೆಳಿಗ್ಗೆ ೬ ಮಂದಿ ಕನ್ನಡಿಗರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಕಳೆದ ೨ ದಿನಗಳಿಂದ ಅಮರನಾಥಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಂದೂ ಸಹ ಭಾರಿ ಮಳೆಯಾಗಿದ್ದು, ಮಧ್ಯಾಹ್ನದವರೆಗೆ ಯಾತ್ರೆ ಸ್ಥಗಿತಗೊಂಡಿತ್ತು. ಮಧ್ಯಾಹ್ನದ ನಂತರ ಹವಾಮಾನ ತಿಳಿಯಾಗಿದ್ದು, ಕೆಲ ಭಾಗದಿಂದ ಅಂದರೆ ಪಂಚತರ್ಣಿ ಮತ್ತು ಶೇಷನಾಗ್ ಕ್ಯಾಂಪ್‌ನಿಂದ ಅಮರನಾಥಯಾತ್ರೆಯನ್ನು ಪುನಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಕೂಲ ಹವಾಮಾನ ದೃಷ್ಟಿಯಿಂದ ಜಮ್ಮುವಿನ ಭಗವತಿ ನಿವಾಸದಿಂದ ಹೊಸ ತಂಡದ ಯಾತ್ರಿಗಳಿಗೆ ಅವಕಾಶ ನೀಡಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆ ಹಾಗೂ ಭೂಕುಸಿತದಿಂದಾಗಿ ಅಮರನಾಥ ಗುಹ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಸಾವಿರಾರು ಯಾತ್ರಿಗಳು ಸಿಲುಕಿದ್ದು, ಭಾರಿ ಮಳೆ ಹಾಗೂ ಚಳಿಯಿಂದ ನಲುಗಿದ್ದಾರೆ. ಇವರುಗಳನ್ನೆಲ್ಲ ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆ ನಡೆದಿದೆ.
ಸುಮಾರು ಸಾವಿರಕ್ಕೂ ಹೆಚ್ಚು ಯಾತ್ರಿಗಳು ಸಿಲುಕಿದ್ದು, ಇವರಲ್ಲಿ ಕರ್ನಾಟದಕ ೮೩ ಮಂದಿ ಇದ್ದಾರೆ. ಕರ್ನಾಟಕ ಯಾತ್ರಿಗಳ ರಕ್ಷಣೆಗೆ ರಾಜ್ಯಸರ್ಕಾರ ಮುಂದಾಗಿದ್ದು, ಇಂದು ೬ ಮಂದಿ ಕನ್ನಡಿಗರನ್ನು ಏರ್‌ಲಿಫ್ಟ್ ಮಾಡಲಾಗಿದೆ. ಬಹುತೇಕ ಕನ್ನಡಿಗರು ಅಮರನಾಥ ಗುಹೆಗೆ ೬ ಕಿ.ಮೀ ದೂರದ ಪಂಚತಾರ್ಣಿ ಟೆಂಟ್‌ನಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ಇದೆ. ಇವರನ್ನೆಲ್ಲ ಸುರಕ್ಷಿತವಾಗಿ ಕರೆತರಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಅಮರನಾಥಯಾತ್ರೆಯಲ್ಲಿ ಸಿಲುಕಿರುವ ಕಾತ್ರಿಗಳಲ್ಲಿ ಗದಗಿದ ೨೩ ಮಂದಿ ಬೆಂಗಳೂರಿನ ರಾಜಾಜಿನಗರದ ೧೭ ಮಂದಿ ಇನ್ನೂ ಹಲವು ಕನ್ನಡಿಗರು ಅಮರನಾಥಯಾತ್ರೆಯ ಮಾರ್ಗಮಧ್ಯದಲ್ಲಿರುವ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಲ್ಲ ಕನ್ನಡಿಗರ ರಕ್ಷಣೆಗೆ ಮುಂದಾಗಿದ್ದು, ಯಾವುದೇ ಕನ್ನಡಿಗರಿಗೂ ತೊಂದರೆಯಾಗದಂತೆ ಕರೆ ತರಲು ಮುಂದಾಗಿದೆ.
೬ ಸಾವು
ಅಮರನಾಥಯಾತ್ರೆಯ ಸ್ಥಗಿತದಿಂದ ಗಾಳಿ, ಮಳೆ, ಚಳಿಗೆ ಕಳೆದೆರೆಡು ದಿನಗಳಿಂದ ವಿವಿಧ ರಾಜ್ಯಗಳ ೬ ಮಂದಿ ಮೃತಪಟ್ಟಿದ್ದು, ಕನ್ನಡಿಗರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಮರನಾಥದಲ್ಲಿ ಸಿಲುಕಿರುವ ಕನ್ನಡಿಗರೆಲ್ಲರೂ ಸುರಕ್ಷಿತವಾಗಿದ್ದಾರೆ. ಇವರೆಲ್ಲ ಸುರಕ್ಷಿತವಾಗಿ ಕರೆತರಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ನಿನ್ನೆ ಹೇಳಿದ್ದರು. ಅದರಂತೆ ಅಮರನಾಥಯಾತ್ರೆಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣಾಕಾರ್ಯ ನಡೆದಿದೆ.
ಪ್ರತಿಕೂಲ ಹವಾಮಾನದ ಕಾರಣ ರಕ್ಷಣಾಕಾರ್ಯಕ್ಕೂ ಅಡ್ಡಿಗಳಿದ್ದು, ಹೆಲಿಕಾಪ್ಟರ್ ಮೂಲಕ ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆ ನಡೆದಿದೆ.
ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದ್ದು, ದೆಹಲಿ, ಹರಿಯಾಣ, ರಾಜಸ್ತಾನ, ಹಿಮಾಚಲಪ್ರದೇಶ, ಉತ್ತರ ಖಂಡ, ರಾಜ್ಯಗಳು ಮಳೆಯಿಂದ ತತ್ತರಿಸಿವೆ. ಮುಂದಿನ ಕೆಲ ದಿನಗಳೂ ಸಹ ಇಡೀ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದೆಹಲಿ ಜಲಾವೃತ
ರಾಷ್ಟ್ರರಾಜಧಾನಿ ದೆಹಲಿ ಭಾರಿ ಮಳೆಯಿಂದ ನಲುಗಿದ್ದು, ಕಳೆದ ೨೪ ಗಂಟೆಗಳಲ್ಲಿ ದೆಹಲಿಯಲ್ಲಿ ೧೫.೩ ಸೆಂ ಮೀನಷ್ಟು ದಾಖಲೆ ಮಳೆಯಾಗಿದೆ. ೧೯೮೨ರ ನಂತರ ದೆಹಲಿಯಲ್ಲಾದ ಅತೀ ದೊಡ್ಡ ಮಳೆ ಇದಾಗಿದೆ. ೧೯೮೨ರಲ್ಲಿ ಒಂದೇ ದಿನ ೧೬.೯ ಸೆಂ ಮೀನಷ್ಟು ಮಳೆಯಾಗಿತ್ತು,
ಮುಂಗಾರಿಗೆ ಪಶ್ಚಿಮದಲ್ಲಾದ ಅಡಚಣೆ ಮತ್ತು ಮಾನ್ಸೂನ್ ಮಾರುತಗಳ ಪರಿಣಾಮ ದೆಹಲಿ ಮತ್ತು ಉತ್ತರ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ.
ಅಧಿಕಾರಿಗಳಿಗೆ ಭಾನುವಾರದ ರಜೆ ರದ್ದು,
ದೆಹಲಿಯಲ್ಲಿ ಭಾರಿ ಮಳೆಯಾಗಿ ಮಳೆಯಿಂದಾಗಿರುವ ಪರಿಸ್ಥಿತಿಯನ್ನು ನಿರ್ವಹಿಸಲು ಮುಖ್ಯಮಂತ್ರಿ ಅರವಿಂದಕೇಜ್ರಿವಾಲ್ ಸರ್ಕಾರಿ ಅಧಿಕಾರಿಗಳ ಭಾನುವಾರದ ರಜೆಯನ್ನು ರದ್ದುಗೊಳಿಸಿದ್ದಾರೆ. ಮಳೆಯಿಂದಾಗಿರುವ ಅನಾಹುತವನ್ನು ನಿರ್ವಹಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಳೆಯಿಂದ ದೆಹಲಿಯ ಬಹುತೇಕ ಕಡೆ ನೀರು ನಿಂತಿದೆ. ಅದರಲ್ಲೂ ತಗ್ಗು ಪ್ರದೇಶದ ಪರಿಸ್ಥಿತಿ ಹೇಳತೀರದ್ದಾಗಿದೆ. ಭಾರಿ ಮಳೆಯಿಂದ ಉದ್ಯಾನವನಗಳು, ಅಂಡರ್‌ಪಾಸ್‌ಗಳು, ಮಾರುಕಟ್ಟೆಗಳು, ಆಸ್ಪತ್ರೆಗಳಲ್ಲೂ ಮೊಳಕಾಳು ಆಳದ ನೀರು ನಿಂತಿದೆ. ಜತೆಗೆ ವಿದ್ಯುತ್ ಮತ್ತು ಇಂಟರ್‌ನೆಟ್ ಸಹ ಅಡಚಣೆಯಾಗಿದೆ.
ಮಳೆ ಪರ್ಯಾಯ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಂಡು ಸಂತ್ರಸ್ತರ ನೆರವಿಗೆ ಮುಂದಾಗಿದೆ. ಮಳೆಯಿಂದ ದೆಹಲಿಯಷ್ಟೇ ಅಲ್ಲ ಉ.ಪ್ರ.ಹಿ.ಪ್ರ, ಜಮ್ಮು ಕಾಶ್ಮೀರ ಉತ್ತರಖಂಡ ಪೂರ್ವ ರಾಜಸ್ತಾನ ಚಂಡೀಘಡ ಪಂಜಾಬ್‌ನಲ್ಲೂ ಮಳೆಯಿಂದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇಲ್ಲೆಲ್ಲ ಹವಾಮಾನ ಇಲಾಖೆ ರೆಡ್‌ಅಲರ್ಟ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದೆ.
ಕನ್ನಡಿಗರ ರಕ್ಷಣೆಗೆ ಕ್ರಮ: ಜೋಶಿ
ಉತ್ತರ ಭಾರತದಲ್ಲಿ ವಿಪರೀತ ಮಳೆ ಹಾಗೂ ಹಿಮ ಬೀಳುತ್ತಿರುವ ಕಾರಣ ಕರ್ನಾಟಕ ಮೂಲದ ೮೦ ಜನ ಅಮರನಾಥ ಯಾತ್ರಿಕರು ಸಿಲುಕಿಕೊಂಡಿದ್ದಾರೆ. ಈಗಾಗಲೇ ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಮಾತನಾಡಿದ್ದು, ಎಲ್ಲರ ರಕ್ಷಣೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿ ವಾತಾವರಣ ವ್ಯತಿರಿಕ್ತವಾಗಿದೆ. ಈ ಸಂದರ್ಭದಲ್ಲಿ ಎಲ್ಲ ಪ್ರವಾಸಿಗಳ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಲಾಗುವುದು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ರಕ್ಷಣೆ ಮಾಡುವುದಾಗಿ ಭರವಸೆ ಕೊಟ್ಟಿದ್ದು, ಈ ನಿಟ್ಟಿನಲ್ಲಿ ಸಂಪೂರ್ಣ ಪ್ರಯತ್ನ ಮಾಡಿ ಎಲ್ಲರ ರಕ್ಷಣೆ ಮಾಡಲಾಗುವುದು ಎಂದರು.
ಸಚಿವ ಎಂ.ಬಿ. ಪಾಟೀಲ ಅವರು ಆದಷ್ಟು ಬೇಗ ಮುಖ್ಯಮಂತ್ರಿ ಆಗಬೇಕು ಎಂದು ಬಿಜೆಪಿಯನ್ನು ಹೆಚ್ಚು ನಿಂದಿಸುತ್ತಾ ಓಡಾಡುತ್ತಿದ್ದಾರೆ. ಬಿಜೆಪಿಗೆ ನಿಂದಿಸುವುದರಿಂದ ಅವರು ಮುಖ್ಯಮಂತ್ರಿ ಆಗೋದಾದರೇ ಅಗಲಿ ಎಂದು ಹಾರೈಸುತ್ತೇನೆ ಎಂದು ಅವರು ಟಾಂಗ್ ಕೊಟ್ಟರು.
ಬಡವರ ಬಗ್ಗೆ ಯಾರಿಗೆ ಎಷ್ಟು ಕಾಳಜಿ ಇದೆ ಎಂಬುದನ್ನು ಜನರು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಏನಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಲಿ. ಅಕ್ಕಿ ಕೊಡುತ್ತೇವೆ ಎಂದು ಹೇಳಿ ಇದೀಗ ನಾವು ಕೊಡುವ ಅಕ್ಕಿಯನ್ನು ತಮ್ಮದು ಎಂದು ಹೇಳಿಕೊಳ್ಳುತ್ತಾ ಇದ್ದಾರೆ. ಯುವ ಶಕ್ತಿಗೆ ಇದುವರೆಗೂ ಒಂದು ನಯಾಪೈಸೆ ಹಣ ಕೊಡುವ ಬಗ್ಗೆ ಮಾತನಾಡಿಲ್ಲ. ವಿದ್ಯುತ್ ಬಿಲ್ ಹೆಚ್ಚು ಮಾಡಿದ್ದಾರೆ. ಈ ಸರ್ಕಾರ ಬಡವರ ಪರವೋ? ವಿರುದ್ದವೋ? ಎಂದು ಅವರು ಪ್ರಶ್ನಿಸಿದರು.