ಅಮರನಾಥ ಯಾತ್ರಿಕರ ರಕ್ಷಣೆಗೆ ಕ್ರಮ: ಜೋಶಿ

ಹುಬ್ಬಳ್ಳಿ ಜು 9: ಉತ್ತರ ಭಾರತದಲ್ಲಿ ವಿಪರೀತ ಮಳೆ ಹಾಗೂ ಹಿಮ ಬೀಳುತ್ತಿರುವ ಕಾರಣ ಕರ್ನಾಟಕ ಮೂಲದ 80 ಜನ ಅಮರನಾಥ ಯಾತ್ರಿಕರು ಸಿಲುಕಿಕೊಂಡಿದ್ದಾರೆ. ಈಗಾಗಲೇ ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಮಾತನಾಡಿದ್ದು, ಎಲ್ಲರ ರಕ್ಷಣೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿ ವಾತಾವರಣ ವ್ಯತಿರಿಕ್ತವಾಗಿದೆ. ಈ ಸಂದರ್ಭದಲ್ಲಿ ಎಲ್ಲ ಪ್ರವಾಸಿಗಳ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಲಾಗುವುದು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ರಕ್ಷಣೆ ಮಾಡುವುದಾಗಿ ಭರವಸೆ ಕೊಟ್ಟಿದ್ದು, ಈ ನಿಟ್ಟಿನಲ್ಲಿ ಸಂಪೂರ್ಣ ಪ್ರಯತ್ನ ಮಾಡಿ ಎಲ್ಲರ ರಕ್ಷಣೆ ಮಾಡಲಾಗುವುದು ಎಂದರು.
ಸಚಿವ ಎಂ.ಬಿ. ಪಾಟೀಲ ಅವರು ಆದಷ್ಟು ಬೇಗ ಮುಖ್ಯಮಂತ್ರಿ ಆಗಬೇಕು ಎಂದು ಬಿಜೆಪಿಯನ್ನು ಹೆಚ್ಚು ನಿಂದಿಸುತ್ತಾ ಓಡಾಡುತ್ತಿದ್ದಾರೆ. ಬಿಜೆಪಿಗೆ ನಿಂದಿಸುವುದರಿಂದ ಅವರು ಮುಖ್ಯಮಂತ್ರಿ ಆಗೋದಾದರೇ ಅಗಲಿ ಎಂದು ಹಾರೈಸುತ್ತೇನೆ ಎಂದು ಅವರು ಟಾಂಗ್ ಕೊಟ್ಟರು.
ಬಡವರ ಬಗ್ಗೆ ಯಾರಿಗೆ ಎಷ್ಟು ಕಾಳಜಿ ಇದೆ ಎಂಬುದನ್ನು ಜನರು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಏನಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಲಿ. ಅಕ್ಕಿ ಕೊಡುತ್ತೇವೆ ಎಂದು ಹೇಳಿ ಇದೀಗ ನಾವು ಕೊಡುವ ಅಕ್ಕಿಯನ್ನು ತಮ್ಮದು ಎಂದು ಹೇಳಿಕೊಳ್ಳುತ್ತಾ ಇದ್ದಾರೆ. ಯುವ ಶಕ್ತಿಗೆ ಇದುವರೆಗೂ ಒಂದು ನಯಾಪೈಸೆ ಹಣ ಕೊಡುವ ಬಗ್ಗೆ ಮಾತನಾಡಿಲ್ಲ. ವಿದ್ಯುತ್ ಬಿಲ್ ಹೆಚ್ಚು ಮಾಡಿದ್ದಾರೆ. ಈ ಸರ್ಕಾರ ಬಡವರ ಪರವೋ ? ವಿರುದ್ದವೋ ? ಎಂದು ಅವರು ಪ್ರಶ್ನೆ ಮಾಡಿದರು.