ಅಮರಣ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಜಿಲ್ಲಾಡಳಿತ


ಮುಧೋಳ,ನ. 4: ರನ್ನ ಸಕ್ಕರೆ ಕಾರ್ಖಾನೆ ಪುನರಾರಂಭ, ಕಾರ್ಮಿಕರ ವೇತನ ಸೇರಿದಂತೆ ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ಕಳೆದ 100 ದಿನಗಳಿಂದ ತಹಶೀಲದಾರ ಕಚೇರಿ ಎದುರಿಗೆ ರೈತರು ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಧರಣಿ ಸತ್ಯಾಗ್ರಹ ಮತ್ತು ನವ್ಹಂಬರ 1 ರಿಂದ ಕಾರ್ಮಿಕ ಸಂಘದ ಅಧ್ಯಕ್ಷ ಈರಣಗೌಡ ಪಾಟೀಲ ಹಾಗೂ ಕಿಶೋರ ಜಗದಾಳೆ ನೇತೃತ್ವದಲ್ಲಿ ಬೇಡಿಕೆಗಳ ಈಡೇರಿಕೆಗಾಗಿ ಅಮರಣ ಉಪವಾಸ ಕೈಗೊಳ್ಳಲಾಗಿತ್ತು.
ಮಂಗಳವಾರ ಇಡೀ ದಿನ ತಹಶೀಲದಾರ ಕಚೇರಿಗೆ ಮುತ್ತಿಗೆ ಹಾಕಿ ಕಾರ್ಮಿಕರು, ರೈತರು ಹೋರಾಟ ನಡೆಸಿದ್ದರು. ಬುಧವಾರ ರನ್ನ ಕಾರ್ಖಾನೆಯ ಹಂಗಾಮಿ ಅಧಿಕಾರಿ ಕಲ್ಲಪ್ಪ ಹೊಬ್ಬನ್ನವರ ಭೇಟಿ ನೀಡಿ ಕಾರ್ಖಾನೆಯ ಕಾರ್ಮಿಕರಿಗೆ ಒಂದು ವರ್ಷದ ಬೋನಸ್ ಘೋಷಿಸಿ ಅಮರಣ ಉಪವಾಸ ನಡೆಸುತ್ತಿದ್ದ ಈರಣಗೌಡ ಪಾಟೀಲ ಅವರಿಗೆ ಎಳೆನೀರು ಕುಡಿಸುವ ಮೂಲಕ ಅಮರಣ ಉಪವಾಸ ಅಂತ್ಯಗೊಳಿಸಿದರು.
ಉಳಿದ 26 ಬೇಡಿಕೆಗಳು ಈಡೇರುವವರೆಗೂ ಕಿಶೋರ ಜಗದಾಳೆ ಅಮರಣ ಉಪವಾಸ ಮುಂದುವರೆಸಿದ್ದಾರೆ.
ಧರಣಿ ಸತ್ಯಾಗ್ರಹ ನಡೆಸುತ್ತಿರುವ ಕಾರ್ಮಿಕರನ್ನುದ್ದೇಶಿಸಿ ರನ್ನ ಕಾರ್ಖಾನೆಯ ಹಂಗಾಮಿ ಅಧಿಕಾರಿ ಮಾತನಾಡಿ, ರನ್ನ ಸಕ್ಕರೆ ಕಾರ್ಖಾನೆಯನ್ನು ಲೀಸ್ ಮೇಲೆ ನೀಡಲು ಸರ್ಕಾರ ಈಗಾಗಲೇ ಟೆಂಡರ್ ಕರೆದಿದ್ದು, 12 ನೇ ತಾರೀಖಿನೊಳಗಾಗಿ ಈ ಕುರಿತು ಸ್ಪಷ್ಟ ನಿರ್ಧಾರ ತಿಳಿಯಲಿದೆ. ಅಲ್ಲಿಯವರೆಗೂ ಕಾರ್ಮಿಕರು ಸಹಕರಿಸಬೇಕೆಂದು ಅವರು ವಿನಂತಿಸಿದರು.
ರೈತ ಮುಖಂಡರಾದ ಈರಪ್ಪ ಹಂಚಿನಾಳ, ಯಲ್ಲಪ್ಪ ಹೆಗಡೆ, ಸಂಗಪ್ಪ ನಾಗರಡ್ಡಿ, ಗೋವಿಂದಪ್ಪ ಹಾಗೂ ಇತರ ಮುಖಂಡರು ಬೋನಸ್ ಕೊಡಿಸುವಲ್ಲಿ ಶ್ರಮವಹಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೊಳ್ಳಿ, ತಹಶೀಲದಾರ ಸಂಗಮೇಶ ಬಾಡಗಿ, ಡಿಎಸ್‍ಪಿ ಪಾಂಡುರಂಗಯ್ಯ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.