ಅಮರಣಾಂತ ಉಪವಾಸದಿಂದ ನಾಟೀಕಾರ ಆರೋಗ್ಯದಲ್ಲಿ ವ್ಯತ್ಯಾಸಸ್ಥಳದಲ್ಲೇ ಬೀಡು ಬಿಟ್ಟ ಅಂಬುಲೆನ್ಸ್, ತಹಸೀಲ್ದಾರ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು

ಅಫಜಲಪುರ: ಮಾ.20:ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ಕಳೆದ ಐದಾರು ದಿನಗಳಿಂದ ಯುವ ಮುಖಂಡ ಶಿವಕುಮಾರ್ ನಾಟೀಕಾರ ನೇತೃತ್ವದಲ್ಲಿ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡ ಅಮರಣಾಂತ ಉಪವಾಸ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಅಂಬುಲೆನ್ಸ್, ತಹಸೀಲ್ದಾರ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಬೀಡು ಬಿಟ್ಟಿದ್ದು ನಾಟಿಕರ್ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ. ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.


ಮಹಾರಾಷ್ಟ್ರದ ವಾಹನಗಳಿಗೆ ಘೇರಾವ್ ಸಾಧ್ಯತೆ
ಮಹಾರಾಷ್ಟ್ರ ರಾಜ್ಯದಿಂದ ನಮ್ಮ ಭಾಗಕ್ಕೆ ಬರುವ ಎಲ್ಲಾ ಸರ್ಕಾರಿ ಬಸ್ಸು ಮತ್ತು ವಾಹನಗಳು, ವ್ಯಾಪಾರ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಓಡಾಟ ಮಾಡುವ ಸರಕು ಸಾಗಾಟ ವಾಹನಗಳಿಗೆ ಘೇರಾವ್ ಹಾಕಿ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುವುದಾಗಿದೆ ಎಂದು ತಿಳಿದುಬಂದಿದೆ.


ಇಂದು ಬುಧವಾರ ಉಜನಿ ಜಲಾಶಯದಿಂದ ಭೀಮಾ ನದಿಗೆ 5 ಟಿಎಂಸಿ ನೀರು ಹರಿಸುವಂತೆ ಒತ್ತಾಯಿಸಿರುವ ಈ ಪ್ರತಿಭಟನೆಗೆ
ಪಟ್ಟಣದ ಸಾರ್ವಜನಿಕ ವ್ಯಾಪಾರಸ್ಥರು, ಉದ್ದಿಮೆದಾರರು, ವರ್ತಕರ ಸಂಘದ ಮುಖ್ಯಸ್ಥರು, ವಾಹನ ಚಾಲಕರು, ಔಷದ ಮಳಿಗೆ ವ್ಯಾಪಾರಸ್ಥರು, ಆಟೋಮೊಬೈಲ್ಸ್ ಅಂಗಡಿ ಮಾಲೀಕರು ಸೇರಿದಂತೆ ಬಹುತೇಕ ಸಂಘಟನೆಗಳ ಮುಖ್ಯಸ್ಥರು ಹಾಗೂ ವಿವಿಧ ಸಮುದಾಯಗಳ ಮುಖಂಡರು ಸ್ವಯಂಪ್ರೇರಿತ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದು ಈ ಹೋರಾಟದಲ್ಲಿ ರೈತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲ್ಲಿದ್ದಾರೆ ಎಂದು ಹೋರಾಟದ ಸಮಿತಿಯಿಂದ ತಿಳಿದು ಬಂದಿದೆ.