
ಕೋಲಾರ,ಸೆ,೭:ಮಕ್ಕಳೆಂಬ ಮೊಳಕೆಗಳಿಗೆ ಶಿಕ್ಷಣವೆಂಬ ನೀರನ್ನೆರೆದು ಜ್ಞಾನಿಗಳೆಂಬ ಅಮೂಲ್ಯ ಫಸಲನ್ನು ಸಮಾಜಕ್ಕೆ ನೀಡುತ್ತಿರುವವನೇ ಶಿಕ್ಷಕ ಎಂದು ನಿವೃತ್ತ ಉಪ ಪ್ರಾಂಶುಪಾಲ ರುದ್ರಪ್ಪ ಹೇಳಿದರು.
ತಾಲೂಕಿನ ಖಾದ್ರಿಪುರ ಗ್ರಾಮದಲ್ಲಿರುವ ಅಮರ ಜ್ಯೋತಿ ಪಬ್ಲಿಕ್ ಶಾಲೆ ಆವರಣದಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿನ ಎಲ್ಲಾ ಹುದ್ದೆಗಳಿಗೆ ಅಡಿಪಾಯವನ್ನು ಹಾಕುವವನೇ ಶಿಕ್ಷಕ ಎಂದು ಶಿಕ್ಷಕರ ಮಹತ್ವ ತಿಳಿಸಿದರು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸಿ.ಮುನಿರಾಜು ಮಾತನಾಡಿ, ಸಮಾಜ ಬದಲಾವಣೆಯಾಗಲು ಉತ್ತಮ ಮಾರ್ಗದರ್ಶಕರಾಗಲು ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಶಿಕ್ಷಕ ವೃತ್ತಿ ದೇವರು ಕೊಟ್ಟ ವರ. ಚಿಕ್ಕ ವಯಸ್ಸಿನಿಂದ ಅವನು ಬೆಳೆದು ದೊಡ್ಡ ಅಕಾರಿಯಾಗಲಿ, ಸಮಾಜ ಸುಧಾರಕನಾಗಲಿ, ರಾಜಕೀಯ ವ್ಯಕ್ತಿಯಾಗಲಿ ಏನೇ ಯಾವುದೇ ರೀತಿ ಸ್ಥಾನಮಾನ ಮತ್ತು ಅವರ ಏಳಿಗೆ ಮಾಡುವಲ್ಲಿ ಶಿಕ್ಷಕನ ಪಾತ್ರ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.
ಶ್ರೀಕೃಷ್ಣನ ಜನ್ಮ ವೃತಾಂತ್ತ ಒಂದು ಕಾರ್ಯ ನಿಮಿತ್ತವಾದದ್ದು ಹೊರತು ಸಾಮಾನ್ಯವಾದುದ್ದಲ್ಲ. ಕೃಷ್ಣ ಜನ್ಮಾಷ್ಟಮಿ ಆಚರಣೆ ನಮ್ಮೆಲ್ಲರಿಗೂ ಒಂದು ಸದವಾಕಾಶ. ಕಾರಣ ನಮ್ಮ ಮಕ್ಕಳನ್ನ ರಾಧೆ-ಕೃಷ್ಣರ ವೇಷಭೂಷಣಗಳನ್ನ ಮಾಡಿ ಪ್ರೀತಿ ಸ್ವರೂಪಿ ಭಗವಂತನನ್ನ ಕಾಣುತ್ತೇವೆ. ಅಷ್ಟೇ ಅಲ್ಲದೆ ದೇಶ ಕಂಡ ಮಹಾನ್ ನಾಯಕರ ಕುರಿತು ಪರಿಚಯಿಸಿ ಅವರ ವೇಷಭೂಷಣಗಳೊಂದಿಗೆ ಆದರ್ಶದ ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸ ಬೇಕೆಂದು ಕಿವಿ ಮಾತು ತಿಳಿಸಿದರು,
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾಲೂಕಿನ ಐತರಸನಹಳ್ಳಿ ಶಾಲೆಯ ಶಿಕ್ಷಕ ಸಿ.ಮುನಿರಾಜು ಅವರನ್ನು ಅಮರ ಜ್ಯೋತಿ ಪಬ್ಲಿಕ್ ಶಾಲೆ ಸಂಸ್ಥೆಯಿಂದ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನೌಕರರ ಸಂಘದಿಂದ ಸನ್ಮಾನಿಸಲಾಯಿತು ಹಾಗೂ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಮುನಿರಾಜು, ಕೋರ್ಟ್ ನಾಗರಾಜ್, ಅಗ್ನಿಶಾಮಕ ದಳ ರಮೇಶ್, ಆಹಾರ ಇಲಾಖೆಯ ರಾಜಣ್ಣ, ಶಿಕ್ಷಕ ಭರತ್, ಜಿಲ್ಲಾ ಚುಟುಕು ಸಾಹಿತ್ಯ ಅಧ್ಯಕ್ಷ ಪಿ.ನಾರಾಯಣಪ್ಪ, ಚನ್ನಪ್ಪ, ಭುವನೇಶ್ವರ್, ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀದೇವಿ ಸ್ವಾಗತಿಸಿ, ವಿದ್ಯಾರ್ಥಿನಿ ರುಕ್ಮಿಣಿ ವಂದಿಸಿದರು. ಹೆಡ್ ಮೇಡಂ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.