
ರಾಯಚೂರು,ಆ.೧೦- ಇಂಗ್ಲೀಷ್ ಭಾಷೆಯ ಮೇಲೆ ಹಿಡಿತವಿರಲಿ, ವಾದ ಮತ್ತು ಪ್ರತಿವಾದಗಳನ್ನ ಹೆಚ್ಚೆಚ್ಚು ಅಭ್ಯಾಸ ಮಾಡಿದರೆ ವಕೀಲ ವೃತ್ತಿಯಲ್ಲಿ ಯಶಸ್ವಿ ಕಾಣಬಹುದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಾರುತಿ ಎಸ್ ಬಗಾಡೆ ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಎಸ್ ಸಿಎಬಿ ಕಾನೂನು ಮಹಾವಿದ್ಯಾಲಯದಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆ ವತಿಯಿಂದ ಗುರುವಾರ ಆಯೋಜಿಸಿದ್ದ ಭೂಸ್ವಾಧೀನ ಕಾಯಿದೆ-೨೦೧೩ ಅಡಿಯಲ್ಲಿ ನ್ಯಾಯಯುತ ಪರಿಹಾರದ ಹಕ್ಕು ಮತ್ತು ಪಾರದರ್ಶಕತೆ ಕುರಿತು ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ವಕೀಲರಾದವರು ಮೊದಲು ನ್ಯಾಯ ಕೊಡಿಸುವಲ್ಲಿ ನಿಪುಣರಾಗಿರಬೇಕು. ಹೆಚ್ಚಿನ ಅಭ್ಯಾಸ ಮಾಡಿದಾಗ ಮಾತ್ರ ನ್ಯಾಯ ಕೊಡಿಸಲು ಸಾಧ್ಯ. ಒಬ್ಬ ವಕೀಲನಿಗೆ ಕೇಸ್ ಗೆಲ್ಲುವ ವಿಶ್ವಾಸ ಇರದಿದ್ದಾಗ ಆತ ವೃತ್ತಿಯಲ್ಲಿ ಯಶಸ್ವಿಯಾಗಲಾರ ಎಂದರು.
ಲಾ ಮುಗಿದ ಮೇಲೆ ವಕೀಲನಾಗ್ತೇನೆ ಎಂದುಕೊಳ್ಳಬೇಡಿ. ಕೋರ್ಸ್ ಆರಂಭದಿಂದಲೂ ಲಾಯರ್ ಆಗುತ್ತೇನೆಂದುಕೊಂಡೇ ಅಭ್ಯಾಸ ಮಾಡಬೇಕು. ತರಗತಿಯಲ್ಲಿ ಕೇವಲ ಅಂಕ ನೀಡಿ ಸರ್ಟಿಫಿಕೇಟ್ ನಿಡುತ್ತಾರಷ್ಟೇ ಆದರೆ ನೀವು ಕಾನೂನು ವಿದ್ಯಾಭ್ಯಾಸ ಆರಂಭದಿಂದಲೂ ಪ್ರಾಯೋಗಿಕ ಚಟುವಟಿಕೆಗಳೆಲ್ಲವನ್ನ ಮಾಡಬೇಕು ಎಂದು ಕಾನೂನು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಆದಷ್ಟು ಇಂಗ್ಲೀಷ್ ಕಲಿಯಿರಿ. ಸ್ಪೋಕನ್, ಗ್ರಾಮರ್ ಅತಿ ಮುಖ್ಯ. ಡ್ರಾಪ್ಟಿಂಗ್ ಮತ್ತು ಆರ್ಗುಮೆಂಟ್ಸ್ ನಲ್ಲಿ ಸತತ ಅಭ್ಯಾಸ ಮಾಡಿದರೆ ನೀವು ಉತ್ತಮ ವಕೀಲರಾಗುವಲ್ಲಿ ಎರಡು ಮಾತಿಲ್ಲ ಎಂದರು.
ಕಾನೂನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ರಾವ್, ಕಾಲೇಜಿನ ಪ್ರಾಂಶುಪಾಲರಾದ ಪದ್ಮಾ, ಕಾರ್ಯದರ್ಶಿ ಸುನಿಲ್‌ಕುಮಾರ ಭಂಡಾರಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಉಮಾ, ಮಲ್ಲಿಕಾರ್ಜುನಯ್ಯ, ವಸುಂಧರಾ ಪಾಟೀಲ್, ಸಿಬ್ಬಂದಿ ವರ್ಗದವರು ಮತ್ತು ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.