ಅಭ್ಯಾಸದಲ್ಲೂ ರಸ್ಸೆಲ್‌ಗೆ ಬೌಲಿಂಗ್ ಮಾಡಲು ಇಚ್ಛಿಸುವುದಿಲ್ಲ

ನವದೆಹಲಿ, ಸೆ.16 – ಇಂಡಿಯನ್ ಪ್ರಿಮಿಯರ್ ಲೀಗ್ ನ 12ನೇ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಚೈನಾ ಮೆನ್ ಬೌಲರ್ ಕುಲ್ದೀಪ್ ಯಾದವ್, ಈ ಬಾರಿ ಸ್ಥಿರ ಪ್ರದರ್ಶನ ನೀಡುವ ಕನಸಿನಲ್ಲಿದ್ದಾರೆ. ಕಳೆದ ಋತುವಿನಲ್ಲಿ 9 ಪಂದ್ಯಗಳಲ್ಲಿ 4 ವಿಕೆಟ್ ಕಬಳಿಸಿದ್ದ ಕುಲ್ದೀಪ್ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ನರೈನ್ ಅವರೊಂದಿಗೆ ಸ್ಪಿನ್ ಜವಾಬ್ದಾರಿ ಹೊರಲು ತಯಾರಿ ನಡೆಸಿದ್ದಾರೆ.

ಕುಲ್ದೀಪ್ ಅವರು ಈ ಬಾರಿ ಹೊಸ ಸವಾಲಿಗೆ ತಯಾರಾಗಿದ್ದಾರೆ. ಯುಎಇನಲ್ಲಿ ನಡೆಯಲಿರುವ ಐಪಿಎಲ್ ಬಗ್ಗೆ ಕುಲ್ದೀಪ್ ತಮ್ಮ ಮನದಾಳ ಮಾತನ್ನು ತಿಳಿಸಿದ್ದಾರೆ. ಕಳೆದ ಐಪಿಎಲ್ ಬಗ್ಗೆ ಮಾತನಾಡಿದ ಅವರು, ಆಟಗಾರನ ವೃತ್ತಿಯಲ್ಲಿ ಏರಿಳಿತಗಳು ಸಾಮಾನ್ಯ. ಕ್ರಿಕೆಟ್ ಗಿಂತ ಯಾರೂ ದೊಡ್ಡವರಲ್ಲ. ನೀವು ಯಾವಾಗಲೂ ಆಟದ ಒಂದು ಭಾಗವಾಗಿರುತ್ತೀರಿ. ನಾಣು ಕಳೆದ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿಲ್ಲ. ಈ ಬಾರಿ ಉತ್ತಮ ಪ್ರದರ್ಶನ ನೀಡಲು ಕಾತುರನಾಗಿದ್ದೇನೆ. ಕಳೆದ ವರ್ಷ ಸಾಕಾಷ್ಟು ಪಾಠ ಕಲಿತಿದ್ದೇನೆ. ಈ ಪಾಠ ಭವಿಷ್ಯದಲ್ಲಿ ಉಪಯೋಗವಾಗಲಿದೆ. ಈ ಬಾರಿ ಉತ್ತಮ ಪ್ರದರ್ಶನ ನೀಡಲು ತಯಾರಿ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.

ವಿವಿಧ ವಿಕೆಟ್ ಕೀಪರ್ ಗಳ ಅಡಿಯಲ್ಲಿ ಆಡಿದ ಅನುಭವದ ಬಗ್ಗೆ ಮಾತನಾಡುತ್ತಾ, ಧೋನಿ ಅವರು ಅನುಭವದ ಕಣಜ. ಅವರ ಸಾಧನೆ ದೊಡ್ಡದು. ಅವರು ತಂಡಕ್ಕಾಗಿ ಬಹುವರ್ಷಗಳ ಕಾಲ ದುಡಿದಿದ್ದಾರೆ. ಅವರ ಸೌಮ್ಯ ಸ್ವಭಾವವೇ ಅವರ ತಾಕತ್ತು ಎಂದಿದ್ದಾರೆ.

ರಿಷಭ್ ಪಂತ್ ಅವರು ವೃತ್ತಿ ಬದುಕಿನಲ್ಲಿ ಇನ್ನು ಸಾಕಷ್ಟು ಕಲಿಯುವುದಿದೆ. ದಿನ ಕಳೆದಂತೆ ಅವರು ಪಕ್ವವಾಗುತ್ತಾರೆ. ಇನ್ನು ದಿನೇಶ್ ಕಾರ್ತಿಕ್ ಆಕ್ರಮಣಕಾರಿ ನಾಯಕ, ನಿರ್ಧಾರಗಳನ್ನು ಬೇಗನೆ ತೆಗೆದುಕೊಳ್ಳುತ್ತಾರೆ. ಅಲ್ಲದೆ ಯೋಜನೆಯನ್ನು ಸಫಲವಾಗಿಸಲು, ಮಾತನಾಡುತ್ತಲೇ ಇರುತ್ತಾರೆ. ದಿನೇಶ್ ಅವರಿಗೆ ಅನುಭವವಿದೆ. ಯುವಕರಿಗೆ ಇವರು ನೆರವಾಗುವ ನಾಯಕ ಎಂದು ಶ್ಲಾಘಿಸಿದ್ದಾರೆ.

ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅಭ್ಯಾಸ ವೇಳೆ ಸಹ ಆಂಡ್ರೆ ರಸ್ಸೆಲ್‌ಗೆ ಬೌಲಿಂಗ್ ಮಾಡಲು ನಾನು ಇಷ್ಟಪಡುವುದಿಲ್ಲ. ಏಕೆಂದರೆ ಅವರು ದೊಡ್ಡ ಹೊಡೆತಕ್ಕೆ ಕೈ ಹಾಕಿದಾಗ ನೀವು ಭಯಭೀತರಾಗುತ್ತೀರಿ, ಮತ್ತು ಕೆಲವೊಮ್ಮೆ ಅವರು ಚೆಂಡನ್ನು ತಪ್ಪಿಸಿಕೊಂಡರೆ, ಬೌಲರ್ ಬಳಿಗೆ ನೇರವಾಗಿ ಬರುತ್ತಾರೆ. ಅವರಿಗೆ ಬೌಲಿಂಗ್ ಮಾಡುವುದರಿಂದ ಡೆತ್ ಓವರ್ ನಲ್ಲಿ ಬೌಲಿಂಗ್ ಮಾಡುವ ಕಲೆಯ ಬಗ್ಗೆ ತಿಳಿದುಕೊಳ್ಳಬಹುದು. ಇದು ನನಗೆ ಉತ್ತಮ ಅನುಭವ ಮತ್ತು ಅವರು ಖಂಡಿತವಾಗಿಯೂ ಅತ್ಯುತ್ತಮ ಟಿ 20 ಆಟಗಾರರಲ್ಲಿ ಒಬ್ಬರು ಮತ್ತು ಅವರನ್ನು ತಂಡದಲ್ಲಿ ಹೊಂದಿದಕ್ಕೆ ಖುಷಿ ಪಡುತ್ತೇವೆ” ಎಂದಿದ್ದಾರೆ.