ಅಭ್ಯರ್ಥಿ ಆಯ್ಕೆ ಬಿರುಸು

ಬೆಂಗಳೂರು,ಮಾ.೩೦:ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗಳು ಚುರುಕುಗೊಂಡಿವೆ.ವಿಧಾನಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳು ಈಗಾಗಲೇ ರ್‍ಯಾಲಿ, ರೋಡ್ ಶೋ ಮೂಲಕ ಅಬ್ಬರದ ಪ್ರಚಾರವನ್ನು ಕಳೆದ ತಿಂಗಳಿನಿಂದಲೇ ನಡೆಸಿದ್ದು, ಚುನಾವಣೆಯ ಹೊಸ್ತಿಲಲ್ಲಿ ಸಭೆ-ಸಮಾವೇಶಗಳನ್ನು ಆಯೋಜಿಸಲು ತಯಾರಿ ನಡೆಸಿವೆ. ಇದೆಲ್ಲದರ ಮಧ್ಯೆ ಅಭ್ಯರ್ಥಿಗಳ ಆಯ್ಕೆಯತ್ತ ಸದ್ಯ ರಾಜಕೀಯ ಪಕ್ಷಗಳು ಗಮನ ಕೇಂದ್ರೀಕರಿಸಿವೆ.
ಗುಜರಾತ್ ಮಾದರಿ ಬಿಜೆಪಿಯಲ್ಲಿ ತಳಮಳ
ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಸಮೀಕ್ಷೆಗಳು ನಡೆದಿವೆಯಾದರೂ ಅಭ್ಯರ್ಥಿ ಆಯ್ಕೆ ಸಂಬಂಧ ನಾಯಕರುಗಳ ಸಭೆಗಳು ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗಳು ಬಿರುಸಾಗಿದ್ದು, ಹಾಲಿ ಶಾಸಕರಲ್ಲಿ ಹಲವರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದ್ದು, ಒಂದು ರೀತಿ ತಳಮಳ ಸೃಷ್ಟಿಯಾಗಿದೆ.
ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗುಜರಾತ್ ಮಾದರಿ ಅನುಸರಿಸುತ್ತದೆ. ಅದರಂತೆ ಹಾಲಿ ಶಾಸಕರಲ್ಲಿ ಹಲವರಿಗೆ ಈ ಬಾರಿ ಟಿಕೆಟ್ ಸಿಗಲ್ಲ. ಹೊಸ ಮುಖಗಳಿಗೆ ಅವಕಾಶ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದು ಬಿಜೆಪಿಯ ಹಲವು ಶಾಸಕರಲ್ಲಿ ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬ ಆತಂಕ ತಂದೊಡ್ಡಿದೆ.
ಗೆಲ್ಲುವ ಮಾನದಂಡದ ಮೇಲೆ ಹಾಗೂ ಸಮೀಕ್ಷಾ ವರದಿಯಾಧರಿಸಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಮಾಡಲಿದ್ದು, ಈಗಾಗಲೇ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪಟ್ಟಿಯನ್ನು ಅಂತಿಮಗೊಳಿಸುವ ಕಸರತ್ತುಗಳು ಇಂದಿನಿಂದ ನಡೆದಿದ್ದು, ಪ್ರಮುಖ ನಾಯಕರು ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಿ ಪಟ್ಟಿಯನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿ ಅನುಮೋದನೆಗೆ ಕಳುಹಿಸಲಾಗುತ್ತದೆ. ಇದಕ್ಕೆಲ್ಲ ೪-೫ ದಿನಗಳು ಆಗಲಿದ್ದು, ಕೇಂದ್ರ ಚುನಾವಣಾ ಸಮಿತಿಯ
ಅನುಮೋದನೆ ನಂತರ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಬಹುತೇಕ ಏ. ೧೦ರ ಹೊತ್ತಿಗೆ ಹೊರ ಬೀಳಲಿದೆ ಎಂದು ಹೇಳಲಾಗಿದೆ.
ಬಿಜೆಪಿಯ ಹಾಲಿ ಶಾಸಕರಲ್ಲಿ ಎಷ್ಟು ಮಂದಿಗೆ ಟಿಕೆಟ್ ಸಿಗುತ್ತದೆ, ಯಾರಿಗೆಲ್ಲ ಟಿಕೆಟ್ ಕೈ ತಪ್ಪುತ್ತದೆ ಎಂಬುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಟಿಕೆಟ್ ಕೈ ತಪ್ಪುವ ಭೀತಿಯಲ್ಲಿರುವ ಕೆಲ ಶಾಸಕರು ಪಕ್ಷದಲ್ಲಿನ ಗಾಡ್ ಫಾದರ್ ಮೂಲಕ ಟಿಕೆಟ್ ಪಡೆಯಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್ ೨ನೇ ಪಟ್ಟಿ ಇಂದು ಸಭೆ
ಕಾಂಗ್ರೆಸ್ ಪಕ್ಷ ಈಗಾಗಲೇ ೧೨೪ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ೨ನೇ ಪಟ್ಟಿ ಆಯ್ಕೆ ಪ್ರಕ್ರಿಯೆಯೂ ವೇಗ ಪಡೆದುಕೊಂಡಿದ್ದು, ಇಂದು ಕಾಂಗ್ರೆಸ್ ಪಕ್ಷದ ಸ್ಕ್ರೀನಿಂಗ್ ಸಮಿತಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಹೈಕಮಾಂಡ್‌ನ ಅನುಮೋದನೆಗೆ ಕಳುಹಿಸಲಾಗುತ್ತದೆ.ಅಭ್ಯರ್ಥಿಗಳ ಆಯ್ಕೆಯ ಕಸರತ್ತುಗಳು ಪೂರ್ಣಗೊಂಡು ಏ. ೧೦ರ ನಂತರ ಕಾಂಗ್ರೆಸ್‌ನ ೨ನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.ಕಾಂಗ್ರೆಸ್ ಪಕ್ಷ ಬಾಕಿ ಇರುವ ೧೨೦ ಕ್ಷೇತ್ರಗಳಿಗೂ ಇಂದಿನ ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ವರಿಷ್ಠರ ಅನುಮೋದನೆಗೆ ಕಳುಹಿಸಲಿದೆ. ಪೈಪೋಟಿ ಹೆಚ್ಚಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ವರಿಷ್ಠರಿಗೆ ಬಿಡುವ ಜತೆಗೆ ಸಂಭವನೀಯ ಬಂಡಾಯ ಸ್ಪರ್ಧೆಗಳನ್ನು ತಪ್ಪಿಸಲು ಕಾಂಗ್ರೆಸ್ ಕೆಲ ಮುಖಂಡರ ಮನವೊಲಿಕೆಗೂ ಪ್ರಯತ್ನ ನಡೆಸಿದೆ. ಆದಷ್ಟು ಯಾವುದೇ ಗೊಂದಲ, ಬಂಡಾಯಗಳಿಗೆ ಅವಕಾಶವಾಗದಂತೆ ಎಚ್ಚರಿಕೆಯಿಂದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯತ್ತ ಗಮನ ಹರಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಇಂದು ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರುಗಳಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಇವರುಗಳು ಪಾಲ್ಗೊಳ್ಳುವರು.
ಸದ್ಯದಲ್ಲೇ ಜೆಡಿಎಸ್ ೨ನೇ ಪಟ್ಟಿ
ಕಾಂಗ್ರೆಸ್-ಬಿಜೆಪಿಗಿಂತ ಮೊದಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಜೆಡಿಎಸ್, ಚುನಾವಣೆ
ದಿನಾಂಕಗಳು ಪ್ರಕಟವಾಗುತ್ತಿದ್ದಂತೆಯೇ ಅಭ್ಯರ್ಥಿಗಳ ೨ನೇ ಪಟ್ಟಿ ಆಯ್ಕೆಯತ್ತ ಚಿತ್ತ ಹರಿಸಿದ್ದು, ಮುಖಂಡರ ಜತೆ ಚರ್ಚೆ ನಡೆಸಿ ಸದ್ಯದಲ್ಲೇ ೨ನೇ ಪಟ್ಟಿ ಬಿಡುಗಡೆ ಮಾಡಲಿದೆ. ಜೆಡಿಎಸ್ ಮೊದಲ ಹಂತದಲ್ಲಿ ೯೩ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.