ಸಂಜೆವಾಣಿ ವಾರ್ತೆ
ಕನಕಗಿರಿ, ಏ.26: ಕನಕಗಿರಿ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದ 12 ಅಭ್ಯರ್ಥಿಗಳ ಚಲನವಲನಗಳ ಮೇಲೆ ಚುನಾವಣಾಧಿಕಾರಿಗಳ ತಂಡವು ಕಟ್ಟುನಿಟ್ಟಿನ ನಿಗಾವಹಿಸಲಿದೆ ಎಂದು ಚುನಾವಣಾಧಿಕಾರಿ ಸಮೀರ್ ಮುಲ್ಲಾ ಅವರು ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಬುಧವಾರ ಎಫ್.ಎಸ್.ಟಿ, ವಿಎಸ್.ಟಿ, ಎಸ್.ಎಸ್.ಟಿ ಹಾಗೂ ಚುನಾವಣಾ ವೆಚ್ಚ ಪರಿಶೀಲನಾ ತಂಡದ ಸಭೆಯನ್ನು ನಡೆಸಿ ಅವರು ಮಾತನಾಡಿದರು. ಮತದಾನಕ್ಕೆ ಇನ್ನು, ಕೆಲವೇ ದಿನಗಳು ಬಾಕಿ ಇರುವುದರಿಂದ ಅಭ್ಯರ್ಥಿಗಳು ಪ್ರಚಾರ ಕಾರ್ಯ ಜೋರಾಗಿರುತ್ತದೆ. ಈ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಎಲ್ಲಾ ಫೈಯ್ಲಿಂಗ್ ಸ್ಕ್ವಾಡ್ ಅಧಿಕಾರಿಗಳ ತಂಡ ಅಭ್ಯರ್ಥಿಗಳ ಮೇಲೆ ನಿಗಾವಹಿಸಬೇಕು. ಜೊತೆಗೆ ಅವರ ಕಾರ್ಯಕರ್ತರು, ಮುಖಂಡರುಗಳು ಮೇಲೆ ನಿಗಾವಹಿಸಲು ಸೂಚಿಸಿದರು.
ನಂತರ ಅಬಕಾರಿ, ಆಹಾರ ಮತ್ತು ನಾಗರೀಕ ಸರಬರಾಜು, ಆದಾಯ ತೆರಿಗೆ ಇಲಾಖೆಯವರು ಕಡ್ಡಾಯವಾಗಿ ಬಾರ್-ರೆಸ್ಟೋರೆಂಟ್, ಪೆಟ್ರೋಲ್ ಬಂಕ್, ಓಲ್ ಸೇಲ್ ಅಂಗಡಿಗಳು ಸೇರಿದಂತೆ ಹಲವು ಸಾರ್ವಜನಿಕ ಸೇವೆಗಳ ಮೇಲೆ ಕಟ್ಟುನಿಟ್ಟಿನ ತಪಾಸಣೆ ನಡೆಸುವ ಮೂಲಕ ನಿಗಾವಹಿಸಲು ತಿಳಿಸಿದರು.
ಅಲ್ಲದೇ, ಎಲ್ಲಾ ಅಧಿಕಾರಿಗಳು ಸಿ-ವಿಜಿಲ್ ಆ್ಯಪ್ ಬಳಕೆ ಮಾಡಬೇಕು. ಪ್ರತಿನಿತ್ಯ ಆ್ಯಪ್ ನಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡುವಂತ ಪ್ರಕರಣಗಳನ್ನು ದಾಖಲು ಮಾಡಬೇಕು. ಚೆಕ್ ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಬೇಕು. ಅನುಮಾನಸ್ಪಾದ ವಾಹನಗಳು, ವ್ಯಕ್ತಿಗಳು ಕಂಡುಬಂದಲ್ಲಿ ಅಂತವರನ್ನು ಸೂಕ್ತ ವಿಚಾರಣೆಗೆ ಒಳಪಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜಯ್ ಕಾಂಬ್ಳೆ ಹಾಗೂ ಎಫ್.ಎಸ್.ಟಿ, ವಿಎಸ್.ಟಿ, ಎಸ್.ಎಸ್.ಟಿ ಮತ್ತು ಚುನಾವಣಾ ವೆಚ್ಚ ಪರಿಶೀಲನಾ ತಂಡದ ಸದಸ್ಯರು ಇದ್ದರು.