
ಬೆಂಗಳೂರು, ಮೇ. ೯- ರಾಜ್ಯ ವಿಧಾನಸಭೆಗೆ ನಾಳೆ ಮತದಾನ ನಡೆಯಲಿದ್ದು, ರಾಜ್ಯದ ಅಧಿಕಾರದ ಗದ್ದುಗೆಯನ್ನು ಯಾವ ಪಕ್ಷಕ್ಕೆ ಮತ ನೀಡಬೇಕು ಎಂಬುದನ್ನು ಮತದಾರರು ನಾಳೆ ನಿರ್ಧಾರ ಮಾಡುವ ಜತೆಗೆ ಕಣದಲ್ಲಿರುವ ೨೬೧೫ ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಹಣೆಬರಹವನ್ನು ಬರೆಯಲಿದ್ದಾರೆ.
ನಾಳೆ ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದ್ದು, ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲ ತಯಾರಿಯನ್ನು ಮಾಡಿಕೊಂಡಿದೆ.
ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಆಗದಂತೆ ನೋಡಿಕೊಳ್ಳಲು ಚುನಾವಣಾ ಕಾರ್ಯಕ್ಕೆ ೨.೨ ಲಕ್ಷ ಪೊಲೀಸರನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ.
ರಾಜ್ಯದಲ್ಲಿ ಒಟ್ಟಾರೆ ಮತದಾನಕ್ಕಾಗಿ ೫೮,೨೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ ೧೧,೬೧೭ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಬುಡಕಟ್ಟು ಜನರಿಗಾಗಿ ಬುಡಕಟ್ಟು ಜನರು ವಾಸ ಮಾಡುವ ಪ್ರದೇಶಗಳಲ್ಲಿ ೪೦ ಮತಗಟ್ಟೆಗಳನ್ನು ಬುಡಕಟ್ಟು ಜನರಿಗಾಗಿಯೇ ಸ್ಥಾಪಿಸಲಾಗಿದೆ.
ಮಹಿಳಾ ಮತದಾರರನ್ನು ಸೆಳೆಯಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ೫ ಗುಲಾಬಿ ಬಣ್ಣದ ಬೂತ್‌ಗಳನ್ನು ಸ್ಥಾಪಿಸಲಾಗಿದ್ದು, ಈ ಬೂತ್‌ಗಳಲ್ಲಿ ಮತಗಟ್ಟೆ ಕಾರ್ಯಗಳಿಗೆ ಮಹಿಳಾ ಸಿಬ್ಬಂದಿಯನ್ನೇ ನಿಯೋಜಿಸಲಾಗಿದೆ. ಬಲೂನ್‌ಗಳ ಅಲಂಕಾರ ಮಾಡಿ ಈ ಬೂತ್‌ಗಳನ್ನು ಸಿಂಗರಿಸಲಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ೧೪೦ ಗುಲಾಬಿ ಬೂತ್‌ಗಳನ್ನು ನಿರ್ಮಾಣ ಮಾಡಲಾಗಿದೆ.
೨೬೧೫ ಅಭ್ಯರ್ಥಿಗಳ ಹಣೆಬರಹ ನಿರ್ಧಾರ
ನಾಳೆ ನಡೆಯಲಿರುವ ಮತದಾನದಲ್ಲಿ ಮತದಾರರು ಚುನಾವಣಾ ಕಣದಲ್ಲಿರುವ ೨೬೧೫ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಬಿಜೆಪಿಯ ೨೨೪, ಕಾಂಗ್ರೆಸ್ ಪಕ್ಷದ ೨೨೩, ಜೆಡಿಎಸ್‌ನ ೨೦೭ ಅಭ್ಯರ್ಥಿಗಳು, ಆಮ್ ಆದ್ಮಿ, ಬಿಎಸ್ಪಿ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸೇರಿದಂತೆ ಒಟ್ಟಾರೆ ೨೬೧೫ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಈ ಚುನಾವಣೆಯಲ್ಲಿ ಒಟ್ಟು ೫,೩೧,೩೩,೦೫೪ ಅರ್ಹ ಮತದಾರರಿದ್ದು, ಇವರಲ್ಲಿ ಪುರುಷ ಮತದಾರರ ಸಂಖ್ಯೆ ೨,೬೭,೨೮,೦೫೩, ಮಹಿಳಾ ಮತದಾರರ ಸಂಖ್ಯೆ, ೨,೬೪,೦೦೦೭೪ ತೃತೀಯ ಲಿಂಗಿ ಮತದಾರರ ಸಂಖ್ಯೆ ೪,೯೨೭. ಇವರೆಲ್ಲ ನಾಳೆ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಯಾವ ಪಕ್ಷದ ಕೈಗೆ ನೀಡಬೇಕು ಎಂಬುದನ್ನು ಮತದಾನದ ಮೂಲಕ ನಿರ್ಧರಿಸುವರು.
ಮತಕೇಂದ್ರಗಳು ಸಜ್ಜು
ನಾಳಿನ ಮತದಾನಕ್ಕೆ ರಾಜ್ಯಾದ್ಯಂತ ೫೮,೨೮೨ ಮತಗಟ್ಟೆಗಳನ್ನು ಚುನಾವಣಾ ಆಯೋಗ ಸಜ್ಜುಗೊಳಿಸಿದ್ದು, ಸುಗಮ ಹಾಗೂ ಸುಲಲಿತ ಮತ ಚಲಾವಣೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.
ಮತ ಚಲಾವಣೆಗೆ ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸಲಾಗುತ್ತಿದ್ದು, ಮತ ಚಲಾಯಿಸಿದ ಖಾತ್ರಿಗೆ ವಿವಿ ಪ್ಯಾಟ್‌ಗಳನ್ನು ಬಳಸಲಾಗುತ್ತಿದೆ.
ನಾಳೆ ಮತದಾನ ಮಾಡಿದವರ ಎಡಗೈ ತೋರು ಬೆರಳಿಗೆ ಶಾಹಿಯನ್ನು ಲೇಪಿಸಲಾಗುತ್ತದೆ.
ಈ ಚುನಾವಣೆಯಲ್ಲಿ ಚುನಾವಣಾ ಆಯೋಗ ಹಿರಿಯ ಮತದಾರರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ನೀಡಿದ್ದು, ನೋಂದಾಯಿತ ಹಿರಿಯ ಮತದಾರರು ಈಗಾಗಲೇ ತಮ್ಮ ಮನೆಯಲ್ಲೇ ಮತ ಚಲಾಯಿಸಿದ್ದಾರೆ.
ಮತದಾನ ಬೆಳಿಗ್ಗೆ ೭ ರಿಂದ ಸಂಜೆ ೬ ರವರೆಗೆ ನಡೆಯಲಿದೆ.
೧೩ ರಂದು ಮತ ಎಣಿಕೆ: ಫಲಿತಾಂಶ
ಮತ ಎಣಿಕೆ ಕಾರ್ಯ ಮೇ ೧೩ ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರ ಬೀಳಲಿದೆ.
ಸಾರ್ವತ್ರಿಕ ರಜೆ
ನಾಳೆ ಮತದಾನದ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ , ಅರೆ ಸರ್ಕಾರಿ, ಖಾಸಗಿ ವಲಯದ ಉದ್ಯೋಗಿಗಳಿಗೆ ವೇತನ ಸಹಿತ ರಜೆಯನ್ನು ನೀಡಲಾಗಿದೆ.
ಮದ್ಯ ಮಾರಾಟ ನಿಷೇಧ
ಚುನಾವಣೆಯ ಬಹಿರಂಗ ಪ್ರಚಾರ ನಿನ್ನೆಗೆ ಅಂತ್ಯವಾಗಿದ್ದು, ಚುನಾವಣಾ ಆಯೋಗ ನಿನ್ನೆ ಸಂಜೆಯಿಂದ ನಾಳೆ ಸಂಜೆ ೬ರ ವರೆಗೆ ಮದ್ಯ ಮಾರಾಟಕ್ಕೂ ನಿಷೇಧ ಹೇರಿದೆ. ಹಾಗೆಯೇ ಮತಗಟ್ಟೆಯ ಸುತ್ತ ೧೦೦ ಮೀಟರ್ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ.
ಮತದಾರರು ಮತದಾರರ ಗುರುತಿನ ಚೀಟಿಯನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ. ಒಂದು ವೇಳೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಭಾವಚಿತ್ರ ಇರುವ ಬ್ಯಾಂಕ್ ಪಾಸ್ ಪುಸ್ತಕ, ಪಾನ್ ಕಾರ್ಡ್, ನರೇಗಾ ಉದ್ಯೋಗ ಗುರುತಿನ ಚೀಟಿ ಸೇರಿದಂತೆ ವಿವಿಧ ೧೩ ಗುರುತಿನ ಚೀಟಿಗಳನ್ನು ಬಳಸಿ ಮತದಾನ ಮಾಡಲು ಅವಕಾಶ ಇದೆ.
ಕೊನೆ ಗಳಿಗೆ ನಾನಾ ಕಸರತ್ತು
ಮತದಾರರ ಓಲೈಕೆಗೆ ಕೊನೆ ಗಳಿಕೆಯ ಕಸರತ್ತು ನಾನಾ ಕರಾಮತ್ತು
ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ನಾಳೆ ನಡೆಯಲಿದ್ದು, ಕೊನೆ ಗಳಿಗೆಯಲ್ಲಿ ಮತದಾರರನ್ನು ಓಲೈಸಲು ಅಭ್ಯರ್ಥಿಗಳು ಕೊನೆ ಗಳಿಗೆಯ ಕಸರತ್ತು ಹಾಗೂ ಕರಾಮತ್ತನ್ನು ನಡೆಸಿದ್ದಾರೆ.
ಈ ಚುನಾವಣೆಗೆ ಬಹಿರಂಗ ಪ್ರಚಾರ ನಿನ್ನೆ ಸಂಜೆ ಅಂತ್ಯಗೊಂಡಿದ್ದು, ಇಂದು ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಕೊನೆ ಗಳಿಗೆಯಲ್ಲಿ ಮತದಾರರನ್ನು ಓಲೈಸುವ ಎಲ್ಲ ರೀತಿಯ ಕರಾಮತ್ತನ್ನು ನಡೆಸಿದ್ದಾರೆ.
ಇಂದು ಸಂಜೆ ೬ರ ವರೆಗೆ ಮನೆ ಮನೆಗೆ ತೆರಳಿ ಮತಯಾಚಿಸಲು ಅವಕಾಶ ಇದೆ.
ಬಹಿರಂಗ ಪ್ರಚಾರ ಅಂತ್ಯವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮತದಾರರನ್ನು ಓಲೈಸಲು “ನಾನಾ ರೀತಿ ಕರಾಮತ್ತು”ಗಳನ್ನು ನಡೆಸಿದ್ದಾರೆ.
ಮತಗಟ್ಟೆಯತ್ತ ಸಿಬ್ಬಂದಿ
ನಾಳಿನ ಮತದಾನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಯಾ ಜಿಲ್ಲೆ ಮತ್ತು ತಾಲ್ಲೂಕುಗಳ ನಿಗದಿತ ಸ್ಥಳಗಳಿಂದ ವಿದ್ಯುನ್ಮಾನ ಮತ ಯಂತ್ರ ಸೇರಿದಂತೆ ಮತಗಟ್ಟೆಯ ಸಾಮಗ್ರಿಯನ್ನು ಪಡೆದು ಮತಗಟ್ಟೆಗೆ ತೆರಳಿದರು.
ಮತಗಟ್ಟೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಬಸ್‌ಗಳ ಮೂಲಕ ಆಯಾ ಮತಗಟ್ಟೆಗಳಿಗೆ ತಲುಪಿಸಲಾಗಿದೆ.
ನಾಳೆ ಮತದಾನ ಮುಗಿದ ನಂತರ ಎಲ್ಲ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯಾ ಜಿಲ್ಲೆ ಹಾಗೂ ತಾಲ್ಲೂಕು ಮತಕೇಂದ್ರಗಳಿಗೆ ಬಂದು ವಿದ್ಯುನ್ಮಾನ ಮತ ಯಂತ್ರಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಸುಪರ್ದಿಗೆ ನೀಡುವರು.
ನಂತರ ವಿದ್ಯುನ್ಮಾನ ಮತ ಯಂತ್ರಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂಗಳಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಇಡಲಾಗುತ್ತದೆ.
ಮೇ.೩ ರಂದು ಸ್ಟ್ರಾಂಗ್ ರೂಂನಿಂದ ಮತ ಏಣಿಕೆ ಕೇಂದ್ರಗಳಿಗೆ ಮತಯಂತ್ರಗಳನ್ನು ಸಾಗಾಣೆ ಮಾಡಿ ಮತ ಏಣಿಕೆ ಮಾಡಲಾಗುತ್ತದೆ.