ಅಭ್ಯರ್ಥಿಗಳ ಭವಿಷ್ಯಕ್ಕೆ ಮತದಾರರ ಮುದ್ರೆ

ಸಂಜೆವಾಣಿ ನ್ಯೂಸ್
ಮೈಸೂರು.ಏ.27:- ಬಿಜೆಪಿ-ಜೆಡಿಎಸ್ ಮೈತ್ರಿಯ ಪ್ರತಿಷ್ಠೆ ಹಾಗೂ ಸಿಎಂ ತವರಿನಲ್ಲಿ ಕಾಂಗ್ರೆಸ್‍ನ ಅಸ್ತಿತ್ವದ ಪ್ರಶ್ನೆಯಾಗಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ಶಾಂತಿಯುತ ಮತದಾನ ನಡೆದಿದ್ದು, ಶೇ65.96 ಮತದಾನವಾಯಿತು.
ಬೆಳಗ್ಗೆಯಿಂದಲೇ ಮತಗಟ್ಟೆಗೆ ತೆರಳಿದ ಮತದಾರರು ಮೈತ್ರಿ ಅಭ್ಯರ್ಥಿ ಯದುವೀರ್, ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಸೇರಿದಂತೆ ಕಣದಲ್ಲಿರುವ 18 ಅಭ್ಯರ್ಥಿಗಳ ಭವಿಷ್ಯಕ್ಕೆ ಅಂತಿಮ ಮುದ್ರೆ ಒತ್ತಿದರು. ಚುನಾವಣಾ ಆಯೋಗದ ಹದ್ದಿನ ಕಣ್ಣು, ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಂಡಿದ್ದ ಭದ್ರತಾ ವ್ಯವಸ್ಥೆಯಿಂದ ಮತದಾನ ಶಾಂತಿಯುತವಾಗಿ ನಡೆಯಿತು. ಮತದಾನದ ಬಗ್ಗೆ ಅರಿವು ಮೂಡಿಸಿದ್ದರಿಂದ ಹಾಗೂ ಸ್ವೀಪ್‍ನ ಜಾಗೃತಿ ಕಾರ್ಯಕ್ರಮಗಳಿಂದ ಮತದಾನದಲ್ಲಿ ಹೆಚ್ಚಳವಾಗಿದೆ.
ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಉತ್ಸಾಹದಿಂದಲೇ ಪಾಲ್ಗೊಂಡರು. ಆರಂಭದಲ್ಲಿ ಉತ್ತಮವಾಗಿದ್ದರೂ ನಂತರ ನಿಧಾನವಾಯಿತು. ಬಿಸಿಲು ಹೆಚ್ಚಾದಂತೆ ಮತದಾನ ಪ್ರಮಾಣ ಕುಸಿತವಾಯಿತು. ಸುಡಿ ಬಿಸಿಲಿನಿಂದಾಗಿ ಮತದಾರರು ಮನೆಯಿಂದ ಹೊರಬರಲು ಹಿಂದೇಟು ಹಾಕಿದರು. ಮತದಾನದ ಅಂತ್ಯದ ಕೊನೆಯ ಎರಡು ಗಂಟೆಯಲ್ಲಿ ಬಿರುಸಿನ ಮತದಾನ ನಡೆಯಿತು.
ಮತಗಟ್ಟೆಗಳಿಂದ ಸುಮಾರು 200 ಮೀಟರ್ ದೂರದಲ್ಲೇ ಅಭ್ಯರ್ಥಿಗಳ ಪರ ಕಾರ್ಯಕರ್ತರು ನಿಲ್ಲಲು ಅವಕಾಶ ನೀಡಿದ್ದರಿಂದ ಬಹುತೇಕ ಮತಗಟ್ಟೆಗಳ ಬಳಿ ಗುಂಪುಗಳು ಕಂಡುಬರಲಿಲ್ಲ. ಮತದಾರರು ತಮ್ಮ ವಾಹನಗಳನ್ನು ಅನತಿ ದೂರದಲ್ಲೇ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ, ಬೆಳಗ್ಗೆ 9 ಗಂಟೆ ವೇಳೆಗೆ ಶೇ.11.01ರಷ್ಟು ಮತದಾನವಾಗಿತ್ತು. 11 ಗಂಟೆ ವೇಳೆಗೆ ಶೇ.25.09ಕ್ಕೆ ತಲುಪಿತ್ತು. 1 ಗಂಟೆಯ ವೇಳೆಗೆ ಶೇ.41.58 ಮತದಾನವಾಗಿ ಮತದಾನ ಪ್ರಮಾಣದ ಹೆಚ್ಚಳದ ಕುರುಹು ನೀಡಿತು. ಮುಂದಿನ ಎರಡು ಗಂಟೆ ಅವಧಿಯಲ್ಲಿ ಮತದಾನ ಪ್ರಮಾಣ ಶೇ.12ರಷ್ಟು ಹೆಚ್ಚಾಗಿ, 3 ಗಂಟೆ ವೇಳೆಗೆ ಶೇ.53.55 ಆಯಿತು. 5 ಗಂಟೆ ಸುಮಾರಿಗೆ ಶೇ.65.85ರಷ್ಟು ಮತದಾನವಾಗಿತ್ತು. ಅಂತಿಮವಾಗಿ ಶೇ65.96 ಮತದಾನವಾಯಿತು.
ನಗರದ ಶ್ರೀಕಾಂತ ಸಂಸ್ಕøತ ಪಾಠಶಾಲೆ, ರಾಮಾನುಜ ರಸ್ತೆಯಲ್ಲಿರುವ ಸೇಂಟ್‍ಮೇರಿಸ್, ಮಹಾರಾಜ ಸಂಸ್ಕøತ ಪಾಠಶಾಲೆ, ಕಾಗಿನೆಲೆ ವಿದ್ಯಾಸಂಸ್ಥೆ, ಆಯುರ್ವೇದ ಆಸ್ಪತ್ರೆ, ವಿವೇಕಾನಂದ ನಗರ ಬಿಜಿಎಸ್ ಶಿಕ್ಷಣ ಸಂಸ್ಥೆ, ಅಶೋಕಪುರಂ ಶಾಲೆಗಳ ಮತಗಟ್ಟೆಗಳಲ್ಲಿ ಮತದಾನ ಬಿರುಸಿನಿಂದ ನಡೆಯಿತು. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ರಾಮಕೃಷ್ಣ ಶಾಲೆ, ನೃಪತುಂಗ ಶಾಲೆ, ವಿಶ್ವಮಾನವ ಶಾಲೆ, ತರಳಬಾಳು ಶಿಕ್ಷಣ ಸಂಸ್ಥೆ, ಬೋಗಾದಿ, ಲಿಂಗಾಂಬುದಿ ಸೇಂಟ್ ಮೇರಿಸ್ ಶಾಲೆ, ದೇವಯ್ಯನ ಹುಂಡಿ ಶಾಲೆ, ಗಂಗೋತ್ರಿ ಶಾಲೆ ಮುಂತಾದ ಕಡೆಗಳಲ್ಲಿ ಮತದಾನ ಚುರುಕಾಗಿತ್ತು.
ಸಿಬ್ಬಂದಿ ಮಾರ್ಗದರ್ಶನ : ಯಾರ ನೆರವಿಲ್ಲದೆ ಮತಗಟ್ಟೆ ಕೇಂದ್ರಗಳಿಗೆ ಬಂದ ವಯಸ್ಸಾದ ಮತದಾರರಿಗೆ ಕೆಲ ಮತಗಟ್ಟೆ ಕೇಂದ್ರದಲ್ಲಿ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿ ಮಾರ್ಗದರ್ಶನ ಮಾಡುತ್ತಿದ್ದರು. ಕಣ್ಣುಗಳು ಮಂಜಾಗಿ, ಮತದಾನ ಮಾಡಲು ತೊಡರಾದಾಗ ಹಿರಿಯ ಅಧಿಕಾರಿ ಹಾಗೂ ಏಜೆಂಟರಿಂದ ಅನುಮತಿ ಪಡೆದು, ಇವುಗಳಲ್ಲಿ ನಿಮಗೆ ಇಷ್ಟ ಆದವರಿಗೆ ಮತ ಚಲಾಯಿಸಿ ಎಂದು ಹೇಳಿ ನೆರವಾದರು.
ಮೊದಲ ಮತದಾನ: ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಯುವಕರು ಹರ್ಷ ವ್ಯಕ್ತಪಡಿಸಿದರು. ಮತ ಚಲಾಯಿಸುವ ಸಂದರ್ಭವನ್ನೇ ಎದುರು ನೋಡುತ್ತಿದ್ದ ಯುವ ಮತದಾರರು ಬೆಳ್ಳಂ ಬೆಳಗ್ಗೆಯೇ ಮತದಾನ ಮಾಡಿ, ಹೊರ ಬಂದು ಸಂಗಡಿಗರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು.
ಮಹಾರಾಜನ ಗೆಟಪ್: ಕುವೆಂಪುನಗರದ ವಿವೇಕಾನಂದ ಸರ್ಕಲ್ ಬಳಿಯ ಮತಗಟ್ಟೆಗೆ ಕುವೆಂಪುನಗರದ ನಿವಾಸಿ ಉಮಾಕಾಂತ್ ಎಂಬುವವರು ಮಹಾರಾಜನ ಗೆಟಪ್‍ನಲ್ಲಿ ಬಂದು ಮತದಾನ ಮಾಡಿ ಗಮನ ಸೆಳೆದರು. ಮೈಸೂರು-ಕೊಡಗು ಕ್ಷೇತ್ರದಲ್ಲಿ ರಾಜವಂಶಸ್ಥ ಯದುವೀರ್ ಅವರು ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ರಾಜರ ಧಿರಿಸು ಧರಿಸಿ ಮತಗಟ್ಟೆಗೆ ಬಂದ ಉಮಾಕಾಂತ್ ಮತಗಟ್ಟೆಯ ಕೇಂದ್ರ ಬಿಂದುವಾಗಿದ್ದರು.
ಕಾರ್ಯಕರ್ತರ ನಡುವೆ ಗಲಾಟೆ : ಚಾಮರಾಜ ಕ್ಷೇತ್ರದಲ್ಲಿ ಟೇಬಲ್ ಹಾಕುವ ವಿಚಾರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ. ಹೆಬ್ಬಾಳು ಬಡಾವಣೆಯ ಶಿವಾನಂದ ಶಾಲೆಯ ಮತಗಟ್ಟೆ ಬಳಿ ಟೇಬಲ್ ಹಾಕುವ ವಿಚಾರಕ್ಕೆ ವಾಗ್ವಾದ ನಡೆಯಿತು. ಟೇಬಲ್ ಹಾಕಲು ಉಭಯ ಪಕ್ಷಗಳ ಕಾರ್ಯಕರ್ತರು ಪಟ್ಟು ಹಿಡಿದರು. ಇದರಿಂದ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ, ತಳ್ಳಾಟ ನೂಕಾಟವಾಯಿತು. ಈ ವೇಳೆ ಘಟನಾ ಸ್ಥಳಕ್ಕೆ ಶಾಸಕ ಕೆ.ಹರೀಶ್‍ಗೌಡ ಭೇಟಿ ನೀಡಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.
2014ರ ಚುನಾವಣೆಯಲ್ಲಿ ಶೇ.67.61 ಮತದಾನವಾಗಿತ್ತು. 2009ರಲ್ಲಿ ನಡೆದ ಹದಿನೈದನೇ ಲೋಕಸಭಾ ಚುನಾವಣೆಯಲ್ಲಿ ಶೇ.58.89 ಮತದಾನವಾಗಿ ಮತದಾನದ ಪ್ರಮಾಣ ಕುಸಿದಿತ್ತು. ಕಳೆದ ಚುನಾವಣೆಯಲ್ಲೂ ಪಿರಿಯಾಪಟ್ಟಣ ಶೇ.77.54 ಮತದಾನದೊಂದಿಗೆ ಅಗ್ರಸ್ಥಾನದಲ್ಲಿತ್ತು. 2009 ಹಾಗೂ 2014ರ ಶೇಕಡಾವಾರು ಮತದಾನ ಗಮನಿಸಿದರೆ ಈ ಬಾರಿ ಹೆಚ್ಚು ಮತದಾನವಾಗಿದೆ.
ಮತದಾನ ಮಾಡಿದರು ಗಣ್ಯರು: ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾರರಲ್ಲಿ ಜಾಗೃತಿ ಮೂಡಿದ್ದು ಬೆಳಗ್ಗೆಯಿಂದಲೇ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತದಾನಕ್ಕೂ ಮುನ್ನ ಕುಲದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಬಳಿಕ ತಮ್ಮ ಪತ್ನಿ ತ್ರಿಷಿಕಾದೇವಿ ಒಡೆಯರ್, ತಾಯಿ ಪ್ರಮೋದಾದೇವಿ ಅವರೊಂದಿಗೆ ಅಗ್ರಹಾರದ ಶ್ರೀಕಾಂತ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಚಾಮುಂಡಿಪುರಂನ ಸೇಂಟ್ ಮೆರೀಸ್ ಶಾಲೆಯ ಮತಗಟ್ಟೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ಮತ ಚಲಾಯಿಸಿದರೆ, ಸುತ್ತೂರಿನ ಮತಗಟ್ಟೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳು ಮತದಾನ ಮಾಡಿದರು. ಶಾಸಕ ಜಿ.ಟಿ.ದೇವೇಗೌಡ ತಮ್ಮ ಪತ್ನಿಯೊಂದಿಗೆ ಗುಂಗ್ರಾಲ್ ಛತ್ರದ ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರೆ, ಮಾಜಿ ಶಾಸಕ ಎಲ್.ನಾಗೇಂದ್ರ ಜಯನಗರದಲ್ಲಿರುವ ಬಾಲೋಧ್ಯಾನ ವಿದ್ಯಾಸಂಸ್ಥೆಯಲ್ಲಿನ ಮತಗಟ್ಟೆಗೆ ತಮ್ಮ ಕುಟುಂಬದವರೊಂದಿಗೆ ತೆರಳಿ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಯಾದವಗಿರಿಯ ಆಕಾಶವಾಣಿ ವೃತ್ತದಲ್ಲಿನ ಶಾಲೆಯಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಮತದಾನ ಮಾಡಿದರು. ಶಿಲ್ಪಿ ಅರುಣ್ ಯೋಗಿರಾಜ್ ಸಂಸ್ಕೃತ ಪಾಠಶಾಲೆಯ ಬೂತ್‍ನಲ್ಲಿ ಕುಟುಂಬ ಸಮೇತ ಬಂದು ಮತ ಚಲಾಯಿಸಿದರು. ಗಣಪತಿ ಸಚ್ಚಿದಾನಂದ ಆಶ್ರಮದ ಹಿರಿಯ, ಕಿರಿಯ ಶ್ರೀಗಳು, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಸಂಸದ ಪ್ರತಾಪಸಿಂಹ, ಶಾಸಕರಾದ ಟಿ.ಎಸ್.ಶ್ರೀವತ್ಸ, ತನ್ವೀರ್ ಸೇಠ್, ಕೆ.ಹರೀಶ್‍ಗೌಡ, ನಟಿ ಮಾಳವಿಕ ಅವಿನಾಶ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ನಾಥ್ ಸೇರಿದಂತೆ ಅನೇಕ ಗಣ್ಯರು ತಮ್ಮ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
ರಿಯಾಯಿತಿ ದರದಲ್ಲಿ ಊಟ, ತಿಂಡಿ: ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ನಗರದ ಕೆಲ ಹೋಟೆಲ್‍ಗಳಲ್ಲಿ ರಿಯಾಯಿತಿ ದರದಲ್ಲಿ ಊಟ, ತಿಂಡಿ ನೀಡಲಾಯಿತು. ನಜರ್ಬಾದ್‍ನ ದಕ್ಷಿಣ ಪಾಕ ಹೋಟೆಲ್‍ನಲ್ಲಿ ಬೆಳಗ್ಗೆ 7ರಿಂದ ಸಂಜೆ 4ರವರೆಗೆ ಹೋಟೆಲ್‍ಗೆ ಬರುವ ಗ್ರಾಹಕರಿಗೆ ಉಚಿತವಾಗಿ ಚೌಚೌ ಬಾತ್ ನೀಡಲಾಯಿತು. ಹೋಟೆಲ್ ಹನುಮಂತುವಿನಲ್ಲಿ ಊಟದ ಬಿಲ್‍ನಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗಿತ್ತು. ಇದಲ್ಲದೆ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಪುಣೇರಿ ಶ್ರೀಮಾನ್ ಚಹಾದಂಗಡಿಯಲ್ಲಿ ಟೀ, ಕಾಫಿಗೆ ಶೇ.20 ರಿಯಾಯಿತಿ ನೀಡಿದ್ದು, ವೋಟ್ ಹಾಕಿ ಬಂದ ಗ್ರಾಹಕ, ಮತದಾನದ ಗುರುತು ತೋರಿದರೆ 20 ರೂ. ಟೀಯನ್ನು 16 ರೂ.ಗೆ ನೀಡಲಾಯಿತು.
ಇದರ ಜತೆಗೆ ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ಮರಳು ಶಿಲ್ಪ ಕಲಾವಿದೆ ಎಂ.ಎನ್.ಗೌರಿ ಸ್ಯಾಂಡ್ ಮ್ಯೂಸಿಯಂಗೆ ವೋಟ್ ಮಾಡಿ ಬರುವ ಪ್ರವಾಸಿಗರಿಗೆ ಟಿಕೆಟ್ ದರದಲ್ಲಿ ಶೇ.30ರಷ್ಟು ರಿಯಾಯಿತಿ ನೀಡಿದ್ದರು. ನಗರದ ಹೆಬ್ಬಾಳು ರಿಂಗ್ ರಸ್ತೆಯಲ್ಲಿನ ಅಮರ್ ದೀಪ್ ಗ್ಯಾಸ್ ಏಜೆನ್ಸಿಯಿಂದ ಗ್ಯಾಸ್ ಸ್ಟೌ ಖರೀದಿ ಮೇಲೆ 500 ರೂ. ರಿಯಾಯಿತಿ ನೀಡಲಾಗಿತ್ತು. ಮತದಾನ ಮಾಡುವ ರಾಜ್ಯದ ನಿವಾಸಿಗಳೊಂದಿಗೆ ನೆರೆಯ ರಾಜ್ಯದ ನಿವಾಸಿಗಳಿಗೂ ಅನುಕೂಲವಾಗುವಂತೆ ಏ.26ರಿಂದ ಜೂ.4ರವರೆಗೆ ಈ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಹಿರಿಯ ನಾಗರಿಕರ ಉತ್ಸಾಹ: ಮತದಾನ ಮಾಡುವ ಉತ್ಸಾವ ಯುವಕರಿಗಿಂತ ಹಿರಿಯರಲ್ಲೇ ಹೆಚ್ಚಿತ್ತು. ಬೆಳಗ್ಗೆಯೇ ಮತಗಟ್ಟೆಗೆ ತೆರಳಿದ ಹಿರಿಯ ನಾಗರಿಕರು ತಮ್ಮ ಹಕ್ಕು ಚಲಾಯಿಸಿದರು. ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶ್ರೀಕಾಂತ್ ವಿದ್ಯಾಸಂಸ್ಥೆಯ ಮತಗಟ್ಟೆತಯಲ್ಲಿ 101 ವರ್ಷದ ತಿಮ್ಮಮ್ಮ ತಾವೇ ಆಟೋದಲ್ಲಿ ಬಂದು ಮತ ಚಲಾಯಿಸಿದರು. ಮಗನ ಸಹಾಯದೊಂದಿಗೆ ಆಗಮಿಸಿದ 80 ವರ್ಷದ ಪಡುವಾರಹಳ್ಳಿಯ ಕೆಂಪಮ್ಮ ಮತದಾನ ಮಾಡಿ ಯುವಕರಿಗೆ ಸ್ಪೂರ್ತಿಯಾದರು. ಅನಾರೋಗ್ಯದಿಂದ ಬಳಲುತ್ತಿರುವವರು, ವಿಕಲಚೇತನರು ವೀಲ್‍ಚೇರ್ನಲ್ಲಿ ಬಂದು ಮತದಾನ ಮಾಡಿದರು.