ಅಭ್ಯರ್ಥಿಗಳ ಎದೆಯಲ್ಲಿ ಢವ ಢವ! ಹಳ್ಳಿ ಕಟ್ಟೆಗಳಲ್ಲಿ ನಡೆಯುತ್ತಿದೆ ಲೆಕ್ಕಾಚಾರ, ನಾಳೆ ಮತ ಎಣಿಕೆ

ಚಿತ್ತಾಪುರ:ಡಿ.29: ಗ್ರಾಮ ಪಂಚಾಯತ್ ಎರಡನೇ ಹಂತದ ಚುನಾವಣೆ 23 ಗ್ರಾಮ ಪಂಚಾಯಿತಿಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದು ಈಗ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರಗೊಂಡು ಭದ್ರತಾ ಕೊಠಡಿಯನ್ನು ಸೇರಿಕೊಂಡಿವೆ.

ಹಳ್ಳಿಕಟ್ಟಿಗಳಲ್ಲಿ ನಡೆಯುತ್ತಿರುವ ಚರ್ಚಾಕೂಟಗಳಿಂದ ಸದ್ಯ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಹೇಗೋ ಸಾಲಸೂಲ ಮಾಡಿ ಚುನಾವಣೆಯನ್ನು ಎದುರಿಸಿದ್ದೇವೆ ದೇವರ ದಯೆ ಈ ಬಾರಿ ಗೆದ್ದು ಬಂದರೆ ಸಾಕಪ್ಪ ಎಂದು ನಾಳೆ ನಡೆಯಲಿರುವ ಮತ ಎಣಿಕೆ ನಿಮಿತ್ಯ ಅಭ್ಯರ್ಥಿಗಳು ದೇವರ ಮೊರೆ ಹೋಗುತ್ತಿದ್ದಾರೆ.

23 ಗ್ರಾಮ ಪಂಚಾಯಿತಿಗಳಲ್ಲಿ 319 ಸ್ಥಾನಗಳಿಗೆ ಸ್ಪರ್ಧಿಸಿದ 767 ಅಭ್ಯರ್ಥಿಗಳು ಫಲಿತಾಂಶ ನಾಳೆ ನಿರ್ಣಯವಾಗಲಿದೆ.
ಈಗಾಗಲೇ 91 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿವಿಧ ಕಾರಣಕ್ಕೆ ಮೂರು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿಲ್ಲ.

ಮತ ಎಣಿಕೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಾಮಪಂಚಾಯಿತಿಗಳ ಚುನಾವಣೆಯ ಮತಎಣಿಕೆ ವ್ಯವಸ್ಥೆ ಮಾಡಿ 200 ಅಧಿಕಾರಿಗಳು ಸಿಬ್ಬಂದಿ ನೇಮಿಸಲಾಗಿದೆ. ಒಟ್ಟು 9 ಕೋಣೆಗಳನ್ನು ಬಳಕೆ ಮಾಡಿಕೊಂಡಿದ್ದು, 48 ಟೇಬಲ್ ವ್ಯವಸ್ಥೆ ಮಾಡಲಾಗಿದೆ.ಪ್ರತಿ ಕೊಠಡಿಯಲ್ಲಿ 4 ರಿಂದ 6 ಟೇಬಲ್ ವ್ಯವಸ್ಥೆ ಮಾಡಲಾಗಿದ್ದು. ಪ್ರತಿ ಟೇಬಲ್ ಗೆ 4 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಅಂದು 7:40ಕ್ಕೆ ಭದ್ರತಾ ಕೊಠಡಿ ತೆರೆಯಲಾಗುವುದು 8 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಹಸೀಲ್ದಾರ್ ಉಮಾಕಾಂತ್ ಹಳ್ಳೆ ತಿಳಿಸಿದ್ದರು. ಈ ವೇಳೆಯಲ್ಲಿ ವಾಡಿ ಪಿಎಸ್ಐ ವಿಜಯಕುಮಾರ್ ಬಾವಗಿ ಇದ್ದರು.