ಬೆಂಗಳೂರು,ಮಾ.೨೬;ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ೧೨೪ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸಹ ಅಭ್ಯರ್ಥಿಗಳ ಆಯ್ಕೆಯತ್ತ ಚಿತ್ತ ಹರಿಸಿದ್ದು,ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಇಂದು ರಾತ್ರಿ ರಾಜ್ಯ ಬಿಜೆಪಿಯ ಪ್ರಮುಖ ಮುಖಂಡರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆಗಳು ಆಗಲಿವೆ.
ಬಿಜೆಪಿ ಇದುವರೆಗೂ ಚುನಾವಣಾ ಪ್ರಚಾರದತ್ತ ಹೆಚ್ಚ ಗಮನ ಹರಿಸಿತ್ತು. ನಿನ್ನೆಯಷ್ಟೇ ದಾವಣಗೆರೆಯಲ್ಲಿ ನಡೆದ ಬಿಜೆಪಿಯ ರಥಯಾತ್ರೆಯ ಸಮಾರೋಪ ಸಮಾರಂಭವಾದ ಮಹಾ ಸಂಗಮದಲ್ಲಿ ಪ್ರಧಾನಿ ಮೋದಿ ಅವರು ಪಾಲ್ಗೊಂಡಿದ್ದರು. ಈಗ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯತ್ತ ಗಮನ ಕೇಂದ್ರೀಕರಿಸಿದೆ.
ಮುಂದಿನ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ಈಗಾಗಲೇ ಎಲ್ಲ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಿದೆ. ಜತೆಗೆ ೧೨ ಮುಖಂಡರ ತಂಡವೂ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಕಾರ್ಯಕರ್ತರು ಹಾಗೂ ಮುಖಂಡರುಗಳ ಅಭಿಪ್ರಾಯವನ್ನು ಸಂಗ್ರಹಿಸಿ ಯಾವ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿಸಿದರೆ ಗೆಲುವು ಸುಲಭ ಎಂಬ ಬಗ್ಗೆ ವರದಿ ನೀಡಿದೆ.
ಈ ಎಲ್ಲ ವರದಿಗಳನ್ನಿಟ್ಟುಕೊಂಡು ಇಂದಿನ ಕೋರ್‌ಕಮಿಟಿ ಸಭೆಯಲ್ಲಿ ಅಮಿತ್ ಶಾ ಮುಖಂಡರ ಜತೆ ಸಂಭವನೀಯ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸುವರು.
ಕೋರ್‌ಕಮಿಟಿ ಸಭೆ ಇಂದು ರಾತ್ರಿ ೮.೩೦ಕ್ಕೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರದಾನ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಸೇರಿದಂತೆ ಕೋರ್‌ಕಮಿಟಿಯ ಎಲ್ಲ ಸದಸ್ಯರುಗಳು ಭಾಗಿಯಾಗುವರು.