ಅಭಿವೃದ್ಧಿ ಯೋಜನೆ ಮೊಟಕುಗೊಳಿಸುವುದೇ ಬಿಜೆಪಿ ಸರ್ಕಾರದ ಸಾಧನೆ

ಪಾವಗಡ, ಜು. ೨೯- ಎಸ್ಸಿ, ಎಸ್ಟಿ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆಗಳನ್ನು ಮೊಟಕುಗೊಳಿಸುವುದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ಶಾಸಕ ವೆಂಕಟರಮಣಪ್ಪ ಆರೋಪಿಸಿದರು.
ಪಟ್ಟಣದ ಎಸ್‌ಎಸ್‌ಕೆ ಸಮುದಾಯ ಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ೭೫ನೇ ಸ್ವಾತಂತ್ರ್ಯ ಸಂಭ್ರಮಾಚರಣೆ ಮತ್ತು ಸಿದ್ಧರಾಮಯ್ಯನವರ ೭೫ನೇ ಜನ್ಮೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ೭೫ ವರ್ಷಗಳ ಸಂಭ್ರಮಾಚರಣೆಯ ಮತ್ತು ಸಿದ್ದರಾಮಯ್ಯ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಕಮಿಟಿ ಆದೇಶದಂತೆ ತಾಲ್ಲೂಕಿನ ಅತ್ಯಂತ ಗ್ರಾಮೀಣ ಭಾಗಗಳಿಂದ ತಾಲ್ಲೂಕು ಪಟ್ಟಣದ ಕೇಂದ್ರ ಬಿಂದುವಿಗೆ ೧೦೦ ಕಿಲೋ ಮೀಟರ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ಪಕ್ಷ ಆದೇಶಿಸಿರುವಂತೆ ಅದರ ಪ್ರಯುಕ್ತ ಹೋಬಳಿಗಳಿಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಬೂತ್ ಮಟ್ಟದ ಕಾರ್ಯಕರ್ತರಿಂದ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಬಿಜೆಪಿ ಭ್ರಷ್ಟಾಚಾರ ಸರ್ಕಾರ ತೊಲಗಿದಾಗ ಮಾತ್ರ ಬಡವರ ಅಭಿವೃದ್ಧಿ ಸಾಧ್ಯ. ಅನೇಕ ಜನಪರ ಕಾರ್ಯಕ್ರಮಗಳಿಗೆ ಬಿಜೆಪಿ ಸರ್ಕಾರ ಹಣ ನೀಡುತ್ತಿಲ್ಲ. ಕೆರೆಗಳಿಗೆ ನೀರು ತುಂಬಿಸಿದರೆ ಮಾತ್ರ ಅಂತರ್ಜಲ ಅಭಿವೃದ್ಧಿಯಾಗಿ ಇಂತಹ ಬರಪೀಡಿತ ತಾಲ್ಲೂಕುಗಳು ಅಭಿವೃದ್ಧಿಯಾಗಲು ಸಾಧ್ಯ. ಆದರೆ ಭದ್ರ ಮೇಲ್ದಂಡೆ ಯೋಜನೆಗೆ ಬಿಜೆಪಿ ಸರ್ಕಾರ ಹಣ ನೀಡದೇ ಇರುವುದರಿಂದ ಯೋಜನೆ ಕುಂಠಿತವಾಗಿದೆ. ಬಿಜೆಪಿ ಸಿಡಿ ಮತ್ತು ಐಟಿ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಮುಖಂಡರು ಪಕ್ಷವನ್ನು ಮುಗಿಸಲು ಸಂಚು ಮಾಡುತ್ತಿದೆ. ಆದರೆ ಕಾಂಗ್ರೆಸ್‌ನವರು ಯಾರೂ ಅವರ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದರು.
ಜೆಡಿಎಸ್ ಪಕ್ಷ ಅದು ಕೇವಲ ತಮ್ಮ ಕುಟುಂಬದ ರಕ್ಷಣೆ ಮತ್ತು ಕುಟುಂಬದವರಿಗೆ ಮಾತ್ರ ಸೀಮಿತವಾಗಿದೆ. ಅಪ್ಪ-ಮಕ್ಕಳು-ಸೊಸೆಯಂದಿರು- ಮೊಮ್ಮಕ್ಕಳ ಜೆಡಿಎಸ್ ಪಕ್ಷ ಕೇವಲ ೧೦ ೨೦ ಸೀಟ್ ಗೆದ್ದರೆ ಯಾರಿಗೆ ಕಡಿಮೆ ಸೀಟುಗಳು ಬಂದರೆ ಅವರು ಕಡೆ ಹೋಗಿ ಚೌಕಾಸಿ ಮಾಡುವುದಕ್ಕೆ ಜೆಡಿಎಸ್ ಪಕ್ಷ ಮಾಡುವುದಕ್ಕೆ ಮತ್ತು ತಾಲ್ಲೂಕಿನ ಮಾಜಿ ಶಾಸಕ ತಿಮ್ಮರಾಯಪ್ಪ ಎಸ್ಸಿ-ಎಸ್ಟಿ ಪರ ಅಂತ ಸುಮ್ಮನೆ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಆರು ಕೋಟಿ ರೂ ವೆಚ್ಚದಲ್ಲಿ ಮಕ್ಕಳಿಗೆ ವಿದ್ಯಾರ್ಥಿನಿಲಯ ಮಂಜೂರು ಮಾಡಿಸಿಕೊಂಡು ಬಂದರೆ ಅಲ್ಲಿ ಕಟ್ಟುವುದು ಬೇಡವೆಂದು ವಿರೋಧ ಮಾಡುತ್ತಾರೆ. ನಮ್ಮ ತಾಲ್ಲೂಕಿಗೆ ಇಂತಹವರು ಶಾಸಕರ ಆಗಬೇಕೆ ಎಂದು ಟೀಕಿಸಿದರು.
ಸಭೆಯಲ್ಲಿ ಮುಖಂಡ ಟಿ.ಎನ್. ನರಸಿಂಹಯ್ಯ, ಮಾಜಿ ಶಾಸಕ ಸೋಮನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್‌ವಿವಿ ವೆಂಕಟೇಶ್, ಪುರಸಭಾಧ್ಯಕ್ಷ ವೇಲುರಾಜು, ಸುದೇಶ್‌ಬಾಬು, ಜಿ.ಪಂ.ಮಾಜಿ ಸದಸ್ಯ ಪಾಪಣ್ಣ, ಶಂಕರ್‌ರೆಡ್ಡಿ, ವಕೀಲ ವೆಂಕಟರಾಮರೆಡ್ಡಿ, ಶೇಷಗಿರಿ ಮತ್ತಿತರರು ಉಪಸ್ಥಿತರಿದ್ದರು.