ಅಭಿವೃದ್ಧಿ ಮತ್ತು ಸೇವೆಯ ತೇರು ಎಳೆಯೋಣ: ರಾಮಚಂದ್ರನ್ ಆರ್

ಬೀದರ, ನ.20: ಈ ಲೋಕದ ಹಿತದೃಷ್ಟಿಯಿಂದಾಗಿ ಅಭಿವೃದ್ಧಿ ಮತ್ತು ಸೇವೆಯ ತೇರನ್ನು ನಾವೆಲ್ಲರೂ ಸೇರಿ ಎಳೆಯೋಣ ಎಂದು ಜಿಲ್ಲಾಧಿಕಾರಿಗಳಾದ ರಾಚಮಂದ್ರನ್ ಆರ್ ಅವರು ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಮನವಿ ಮಾಡಿದರು.

ನವೆಂಬರ್ 19ರಿಂದ ನವೆಂಬರ್ 25ರವರೆಗೆ ರಾಜ್ಯಾದ್ಯಂತ ರಾಷ್ಟ್ರೀಯ ಐಕ್ಯತಾ ಸಪ್ತಾಹ ಆಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು.

ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ಅರ್ಪಣಾ ಮನೋಭಾವ ತುಂಬಾ ಮುಖ್ಯವಾಗಿದೆ. ಇದನ್ನು ನಾವು ನಮ್ಮ ಕೆಲಸದಲ್ಲೂ ಅಳವಡಿಸಿಕೊಳ್ಳಬೇಕು. ಸರ್ಕಾರಿ ಸೇವೆ ಮಾಡಲು ಅವಕಾಶ ಸಿಕ್ಕ ನಾವುಗಳು ನಮ್ಮ ನಮ್ಮ ಜಬಾಬ್ದಾರಿ ಮತ್ತು ಕರ್ತವ್ಯಗಳನ್ನು ಅರಿತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸರ್ಕಾರಿ ನೌಕರರು ಬಹುತೇಕ ಸಮಯವನ್ನು ಮನೆಯಲ್ಲಿ ಕಳೆಯುವುದಕ್ಕಿಂತ ಸರ್ಕಾರಿ ಕಚೇರಿಗಳಲ್ಲಿಯೇ ಕಳೆಯುತ್ತಾರೆ. ಹೀಗಾಗಿ ನಾವು ಕಚೇರಿಗಳಲ್ಲಿ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಕೆಲಸ ನಿರ್ವಹಿಸಬೇಕು. ಸಹೋದರ ಸಹೋದರಿಯರಂತೆ ಇರಬೇಕು ಎಂದು ತಿಳಿಸಿದರು.

ಕೆಲಸ ಮಾಡಿ ಕೆಲಸ ಮಾಡಿ ಎಂದು ಪದೇಪದೆ ಹೇಳಿಸಿಕೊಂಡು ಕಾರ್ಯ ಮಾಡುವುದರಲ್ಲಿ ಅರ್ಥವಿರುವುದಿಲ್ಲ. ಯಾವುದೇ ಕಡತ, ಯಾವುದೇ ಅರ್ಜಿಯ ಮಹತ್ವ ಏನು ಎಂಬುದರ ಬಗ್ಗೆ ಅರಿತು ಅದನ್ನು ಕಾಲಮಿತಿಯೊಳಗೆ ಸರಿಪಡಿಸಲು ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.

ಪ್ರಾಮಾಣಿಕವಾಗಿ ಸರ್ಕಾರಿ ಸೇವೆ ಮಾಡಲು ಅಡ್ಡಬರುವ ಯಾವುದೇ ಕಳೆಯನ್ನು ತೆಗೆಯಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಸಿದ ಜಿಲ್ಲಾಧಿಕಾರಿಗಳು, ಸಂವಿಧಾನ ಬದ್ಧವಾದ ಆಡಳಿತ ಮತ್ತು ಸೇವೆ ನೀಡಲು ನಮ್ಮನ್ನು ನಾವು ಅರ್ಪಿಸಿಕೊಳ್ಳೋಣ ಎಂದು ತಿಳಿಸಿದರು.

ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ: ಸರ್ಕಾರಿ ಕಚೇರಿಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕಿದೆ. ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ನಡೆದರೆ ಅದರ ವಿರುದ್ಧ ಮಹಿಳಾ ಸಿಬ್ಬಂದಿಯು ದನಿ ಎತ್ತಬೇಕು. ಯಾರಾದರು ಮಹಿಳಾ ಸಿಬ್ಬಂದಿ ಆ ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೆ ಅಂತವರು ಧೈರ್ಯದಿಂದ ವಿಷಯ ತಿಳಿಸಿ ತಪ್ಪಿತಸ್ಥರ ಮೇಲೆ ಶಿಕ್ಷೆಗೆ ಮುಂದಾಗಬೇಕು. ಅಂತವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಪ್ರಮಾಣ ವಚನ: ‘ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ಅರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತೇನೆಂದು ನಾನು ಶ್ರದ್ಧಾಪೂರ್ವಕವಾಗಿ ಪ್ರಮಾಣ ಮಾಡುತ್ತೇನೆ. ಅಲ್ಲದೇ ನಾನು ಎಂದಿಗೂ ಹಿಂಸಾಚಾರದಲ್ಲಿ ತೊಡಗುವುದಿಲ್ಲವೆಂದು ಮತ್ತು ಮತ, ಭಾಷೆ, ಪ್ರದೇಶ ಅಥವಾ ಇತರ ರಾಜಕೀಯ ಅಥವಾ ಆರ್ಥಿಕ ಕುಂದುಕೊರತೆಗಳ ಬಗೆಗಿನ ಭಿನ್ನಭಿಪ್ರಾಯಗಳನ್ನು ಮತ್ತು ವಿವಾದಗಳನ್ನು ಶಾಂತಿಯುತವಾಗಿ ಹಾಗೂ ಸಂವಿಧಾನತ್ಮಕ ರೀತಿಯಲ್ಲಿ ಬಗೆಹರಿಸಿಕೊಳ್ಳುವ ದಿಸೆಯಲ್ಲಿ ನನ್ನ ಪ್ರಯತ್ನವನ್ನು ಮುಂದುವರೆಸುತ್ತೇನೆಂದೂ ಪ್ರಮಾಣ ಮಾಡುತ್ತೇನೆ’ ಎಂಬ ಪ್ರಮಾಣ ವಚನವನ್ನು ಇದೆ ವೇಳೆ ಜಿಲ್ಲಾಧಿಕಾರಿಗಳು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬೋಧಿಸಿದರು.

ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮೋತಿಲಾಲ್ ಲಮಾಣಿ, ಆಹಾರ ಇಲಾಖೆಯ ಉಪ ನಿರ್ದೇಶಕರಾದ ಬಿ.ಬಾಬುರೆಡ್ಡಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.