ಅಭಿವೃದ್ಧಿ ಪಥದತ್ತ ಅರಸೀಕೆರೆ ದಾಪುಗಾಲು

ಅರಸೀಕೆರೆ, ಮಾ. ೨೭- ತಾಲ್ಲೂಕು ಅತ್ಯಂತ ವೇಗದಲ್ಲಿ ಬೆಳೆಯುತ್ತಿದ್ದು, ಜನಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಇದಕ್ಕೆ ಪೂರಕವಾಗಿ ಬ್ಲಡ್ ಬ್ಯಾಂಕ್ ಸೇರಿದಂತೆ ವಿವಿಧ ಸೇವಾ ಕಾರ್ಯಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಂತಹ ಸೇವಾ ಘಟಕಗಳು ಜರೂರು ಅವಶ್ಯಕತೆ ಇದೆ ಎಂದು ತಹಶೀಲ್ದಾರ್ ಸಂತೋಷ್‌ಕುಮಾರ್ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ತಾಲ್ಲೂಕಿನಲ್ಲಿ ಸ್ಥಾಪಿಸಲಾಗುತ್ತಿರುವ ನೂತನ ಘಟಕದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರಸೀಕೆರೆ ತಾಲ್ಲೂಕು ಎಲ್ಲ ರೀತಿಯಿಂದಲೂ ಅಭಿವೃದ್ದಿ ಪಥದೊಂದಿಗೆ ದಾಪುಗಾಲು ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಸೇವಾ ಕಾರ್ಯಗಳಾದ ಸ್ವಯಂ ಪ್ರೇರಿತ ರಕ್ತದಾನ, ರಕ್ತದಾನದ ಬಗ್ಗೆ ಮಾಹಿತಿ, ಕಾರ್ಯಗಾರಗಳು, ಯುವ ಜನತೆಯಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಇಂದಿನ ಒತ್ತಡದ ಜೀವನದಲ್ಲಿ ಆಗುತ್ತಿರುವ ಆರೋಗ್ಯ ಏರುಪೇರಿಗೆ ಸೂಕ್ತ ಮಾರ್ಗದರ್ಶನ ಮಾಡಲು ಅರಸೀಕೆರೆಗೆ ರೆಡ್‌ಕ್ರಾಸ್ ಸಂಸ್ಥೆಯಂತಹ ಅಂತಾರಾಷ್ಟ್ರೀಯ ಮಟ್ಟದ ಘಟಕ ಅವಶ್ಯಕವಾಗಿದೆ. ಇಂತಹ ಸಂಸ್ಥೆ ಚಟುವಟಿಕೆಗಳನ್ನು ಜನರ ಬಳಿಗೆ ತಲುಪಿಸಲು ಒಂದು ಸ್ವಯಂ ಪ್ರೇರಿತ ತಂಡದ ಸಮಾನ ಮನಸ್ಕರು ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ. ಸಂಸ್ಥೆ ಸೇವಾ ಕಾರ್ಯಗಳಿಗೆ ತಾಲ್ಲೂಕು ಅಡಳಿತ ತನ್ನ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಭಾಪತಿ ಹೆಚ್.ಬಿ.ಮೋಹನ್ ಮಾತನಾಡಿ, ಅರಸೀಕೆರೆ ನಗರದಲ್ಲಿ ಈ ಹಿಂದೆ ರೆಡ್‌ಕ್ರಾಸ್ ಸಂಸ್ಥೆ ಘಟಕ ಸ್ಥಾಪಿಸಲು ಆಸಕ್ತರಿಗೆ ಅವಕಾಶ ನೀಡಲಾಗಿತ್ತು. ಆದರೆ ಅವರ ನಿರ್ಲಕ್ಷದಿಂದ ಈಗ ನೂತನ ಘಟಕವನ್ನು ಸ್ಥಾಪಿಸಲು ಪೂರ್ವಭಾವಿ ಸಭೆ ಕರೆಯಲಾಗಿದೆ. ರೆಡ್‌ಕ್ರಾಸ್ ಸಂಸ್ಥೆಗೆ ರಾಷ್ಟ್ರಮಟ್ಟದಲ್ಲಿ ರಾಷ್ಟ್ರಪತಿಯರು ಅಧ್ಯಕ್ಷರಾಗಿದ್ದು, ರಾಜ್ಯ ಮಟ್ಟದಲ್ಲಿ ರಾಜ್ಯಪಾಲರು ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷರಾಗಿರುತ್ತಾರೆ ಎಂದರು.
ಸಂಸ್ಥೆ ಸದಸ್ಯ ಜಾವಗಲ್ ಪ್ರಸನ್ನಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆ ವಿಶ್ವದಲ್ಲಿ ತನ್ನದೇ ವ್ಯಕ್ತಿತ್ವ ಹೊಂದಿದೆ. ಇದಕ್ಕೆ ಪೂರಕವಾಗಿ ಅರಸೀಕೆರೆ ತಾಲ್ಲೂಕಿನಲ್ಲಿ ಈ ಸಂಸ್ಥೆಯ ಮೂಲಕ ಸೇವೆ ಸಲ್ಲಿಸಲು ಸಮಾನ ಮನಸ್ಕರ ತಂಡವೇ ಇದೆ. ಈ ತಂಡದ ಮೂಲಕ ಸೇವಾ ಚಟುವಟಿಕೆಗಳನ್ನು ಜನರ ಬಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಖ್ಯವಾಗಿ ಅರಸೀಕೆರೆ ತಾಲ್ಲೂಕಿಗೆ ಬ್ಲಡ್ ಬ್ಯಾಂಕ್ ಸ್ಥಾಪನೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಪ್ರಾರಂಭಿಸಬೇಕಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಜನಸಮಾನ್ಯರ ಮಧ್ಯೆ ಸಂಸ್ಥೆ ಹೆಸರಿಗೆ ಯಾವುದೇ ಕಳಂಕ ಬಾರದಂತೆ ಸೇವಾ ಚಟುವಟಿಕೆಗಳನ್ನು ಮಾಡೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತ, ಖಜಾಂಚಿ ಜಯೇಂದ್ರಕುಮಾರ್, ಜಿಲ್ಲಾ ಪ್ರಯೋಗಶಾಲೆ ತಜ್ಞರ ಸಂಘದ ಅಧ್ಯಕ್ಷ ಬಿ. ಪರಮೇಶ್, ಅರುಣ್‌ಕುಮಾರ್, ಹೊಬಳಿ ಕಸಾಪ ಘಟಕದ ಅಧ್ಯಕ್ಷ ದೀವಾಕರ್ ಬಾಬು, ಕಣಕಟ್ಟೆ ರವಿ, ಮೇಲೇನಹಳ್ಳಿ ಮಲ್ಲಿಕಾರ್ಜುನ, ಕಸಾಪ ಉಪಾಧ್ಯಕ್ಷ ಆನಂದ್ ಕೌಶಿಕ್, ಉಪನ್ಯಾಸಕಿ ಸುಧಾಕಲ್ಯಾಣ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾತ್ಯಾಯಿನಿ ತೇವರಿಮಠ್ ಮತ್ತಿತರರು ಉಪಸ್ಥಿತರಿದ್ದರು.