ಅಭಿವೃದ್ಧಿ ನಿರ್ಲಕ್ಷ್ಯ ಭ್ರಷ್ಟಾಚಾರಕ್ಕೆ ಮಣೆ

ಬೆಂಗಳೂರು, ಜ. ೧೪- ಕೇಂದ್ರ, ರಾಜ್ಯ ಸರ್ಕಾರ, ಭ್ರಷ್ಟಾಚಾರವನ್ನು ಪೋಷಣೆ ಮಾಡುತ್ತಿದೆ ಹೊರತು, ಅಭಿವೃದ್ದಿಯತ್ತ ಗಮನಹರಿಸದೆ, ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕನ್ನಡಪರ ಹೋರಾಟಗಾರ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದರು.
ಕೆಆರ್ ಎಸ್ ಎಜುಕೇಷನ್ ಅಂಡ್ ರೂರಲ್ ಡೆವಲಪ್ ಮೆಂಟ್ ಟ್ರಸ್ಟ್ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಶಾರದಾ ರಾಜಣ್ಣ ಅವರ ಬದುಕು,ಹೋರಾಟ,ಸಮಾಜಸೇವೆ ಬಗ್ಗೆ ಡಾ.ಬೆಟ್ಟಯ್ಯ ರಾಜಣ್ಣ ಅವರ “ಸಾರ್ಥಕ” ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಸರ್ಕಾರಗಳಿಗೆ ಸಮಾಜದ ಬಗ್ಗೆ ಕಾಳಜಿಯಿಲ್ಲ, ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಚಿಂತನೆಯಿಲ್ಲ,ಬಲಿಷ್ಠರಿಗೆ ಭೂಮಿ, ವಾಣಿಜ್ಯ, ಶಿಕ್ಷಣ ,ಆರೋಗ್ಯ ಕ್ಷೇತ್ರ ನೀಡುವತ್ತಾ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ,ಸರ್ಕಾರ ಮಾಡಬೇಕಾದ ಕೆಲಸವನ್ನು ಅನಿವಾಸಿ ಭಾರತೀಯರಾದ ಡಾ. ಬೆಟ್ಟಯ್ಯ ರಾಜಣ್ಣ ಮತ್ತು ದಿವಂಗತ ಶಾರದಾ ರಾಜಣ್ಣ ಅವರು ಮಾಡುತ್ತಿದ್ದಾರೆ, ಗ್ರಾಮೀಣ ಬಡಜನರ ಬದುಕನ್ನು ಹಸನು ಮಾಡಲು ನೂರಾರು ಜನರಿಗೆ ಮೈಕ್ರೋಫೈನಾನ್ಸ್ ವತಿಯಿಂದ ಬಡ್ಡಿಯಿಲ್ಲದ ಹಣಕಾಸು ನೆರವು, ಉಚಿತ ಶಿಕ್ಷಣವನ್ನು ನೀಡುತ್ತಿದ್ದಾರೆ,ಇವರಂತೆ ಭಾರತೀಯ ನೆಲದ ಋಣ,ತಮ್ಮೂರಿನ ಸೇವೆಯನ್ನು ವಿದೇಶದಲ್ಲಿ ನೆಲಸಿರುವ ಭಾರತೀಯರು ಮಾಡಬೇಕೆಂದು ಕರೆ ನೀಡಿದರು.
ಅಮೇರಿಕಾ ನಿವಾಸಿ ಕೆಆರ್ ಎಸ್ ಎಜುಕೇಷನ್ ಅಂಡ್ ರೂರಲ್ ಡೆವಲಪ್ ಮೆಂಟ್ ಟ್ರಸ್ಟ್ ನ ಅಧ್ಯಕ್ಷ ಡಾ.ಬೆಟ್ಟಯ್ಯ ರಾಜಣ್ಣ ಮಾತನಾಡಿ ಇಲ್ಲಿನ ಸ್ನೇಹಿತರು,ಹಿತೈಷಿಗಳು ಸಹಕಾರ ನೀಡುತ್ತಿರುವುದರಿಂದ ನನ್ನ ದುಡಿಮೆಯಲ್ಲಿ ಶೇ ೨೫ ರಷ್ಟನ್ನು ಮೀಸಲಿಟ್ಟು ಸಮಾಜ ಸೇವೆ ಮಾಡುತ್ತಿದ್ದೇನೆ, ದೇವರು ಕೊಟ್ಟ ಸಂಪತ್ತನ್ನು ಸೇವೆ ಮೂಲಕ ದೇವರಿಗೆ ಅರ್ಪಣೆ ಮಾಡಲಾಗುತ್ತಿದೆ ಎಂದರು.
ಅಮೇರಿಕ ಭಾರತೀಯ ರಾಯಭಾರಿ ಕಚೇರಿಯ ನಿವೃತ್ತ ಅಧಿಕಾರಿ ಆರತಿ ಕೃಷ್ಣ ಮಾತನಾಡಿ ಕರ್ನಾಟಕದವರು ಸೇರಿದಂತೆ ಭಾರತೀಯರು ಅಮೆರಿಕದಲ್ಲಿ ಬಹಳಷ್ಟು ಸಿರಿವಂತರಿದ್ದಾರೆ, ಶಾರದ ರಾಜಣ್ಣ ಅವರಂತೆ ಹುಟ್ಟೂರಿನ ಸೇವೆ,ನೆರೆಹೊರೆಯ ಬಡವರಿಗೆ ಸಹಾಯ ಮಾಡುವ ಮೂಲಕ ಶ್ರೀಮಂತ ರಾಷ್ಟ್ರ ಕಟ್ಟಬೇಕಾಗಿದೆ ಎಂದು ಹೇಳಿದರು.
ಮಾಜಿ ಸಂಸದ ಸಿ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.