ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಬಾಗಲಕೋಟ, ಜ. 2 : ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಜನಾಂಗದ ಏಳ್ಗೆಗಾಗಿ ನದಾಫ/ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಸ್.ಎಚ್.ಮುದಕವಿ ಮಾತನಾಡಿ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಜನಾಂಗವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದವರಾಗಿದ್ದೇವೆ.ಕೇಂದ್ರ ಸರಕಾರವು ಓಬಿಸಿ ಪಟ್ಟಿಯಲ್ಲಿ ನದಾಫ್/ಪಿಂಜಾರ ಜನಾಂಗವನ್ನು ಸೇರ್ಪಡೆ ಮಾಡಿದ್ದು, ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದಿರುವ ಕಾಯ್ದೆಯಲ್ಲಿಯು ಸಹ ಕರ್ನಾಟಕ ರಾಜ್ಯದಲ್ಲಿರುವ ನದಾಫ್/ಪಿಂಜಾರ ಜನಾಂಗವನ್ನು ಅತ್ಯಂತ ಹಿಂದುಳಿದಿರುವ ಬಗ್ಗೆ ಗುರುತಿಸಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜನಾಂಗದ ಅಭಿವೃದ್ಧಿಗಾಗಿ ಯಾವುದೇ ಯೋಜನೆಗಳನ್ನು ಹಾಕಿಕೊಂಡಿಲ್ಲ. ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ನಮ್ಮ ಜನಾಂಗ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರುತ್ತೇವೆ. ಕರ್ನಾಟಕ ಅನುಸೂಚಿತ ಜಾತಿ, ಅನುಸೂಚಿತ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಕಾಯ್ದೆಯಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಅರ್ಜಿದಾರರಿಂದ ಪ್ರಮಾಣ ಪತ್ರ (ಅಫಿಡಾವೆಟ್) ಪಡೆದು, ಸ್ಥಳ ಪರಿಶೀಲನೆ ಮೂಲಕ ಮಹಜರ್ ಮಾಡಬೇಕೆಂದಿದೆ. ಹಾಗೂ ಭಾರತದ ಸರ್ವೋಚ್ಛ ನ್ಯಾಯಾಲಯವೂ ಸಹ ಶಾಲಾ ದಾಖಲಾತಿಗಳು ನೈಜ ಜಾತಿ ಎಂದು ಪರಿಗಣಿಸಲು ಬರುವದಿಲ್ಲ ಎಂದು ನೀಡಿರುವ ಆದೇಶವನ್ನು ಹಾಗೂ ಪ್ರಧಾನ ಕಾರ್ಯ ದರ್ಶಿಗಳು ಸಮಾಜಕಲ್ಯಾಣ ಇಲಾಖೆ ಯವರ ಸುತ್ತೋಲೆಯಲ್ಲಿ ದಾಖಲಿಸಿರುವುದನ್ನು ಕಂದಾಯ ಇಲಾಖಾ ಅಧಿಕಾರಿಗಳು ಪರಿಗಣಿಸುತ್ತಿಲ್ಲ. ಆದ್ದರಿಂದ ಅರ್ಜಿದಾರರಿಂದ ಅಫಿಡೆವಿಟ್‍ನ್ನು ಪಡೆದು, ಸ್ಥಳ ಪರಿಶೀಲಿಸಿ, ಮಹಜರ್ ಹಾಗೂ ನಮ್ಮ ಸಂಘದ ತಾಲೂಕ ಘಟಕ, ಜಿಲ್ಲಾ ಘಟಕ ನೀಡುವ ಆಜೀವ ಸದಸ್ಯತ್ವದ ದೃಢೀಕರಣವನ್ನು ಸಹ ಮಹಜರಿನ ಒಂದು ಭಾಗವೆಂದು ಪರಿಗಣಿಸಿ, ಯಾವದೇ ರೀತಿಯ ತೊಂದರೆಗೆ ಒಳಪಡಿಸದಂತೆ ನೈಜ ಜಾತಿ ಪ್ರಮಾಣ ಪತ್ರವಾದ ಪ್ರವರ್ಗ-1 ನ್ನು ನೀಡುವ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗದಗ ವಿಭಾಗೀಯ ಉಪಾಧ್ಯಕ್ಷರಾದ ಪಿ.ಇಮಾಮಸಾಹೇಬ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಿಯಾನಾ ಎಲ್.ನದಾಫ, ರಾಜ್ಯ ಸಮಿತಿ ಸದಸ್ಯರಾದ ಎಂ.ಎಂ.ಚಿತ್ತರಗಿ,ಪ್ರ,ಕಾರ್ಯದರ್ಶಿ ಅಹಮ್ಮದಸಾಬ ಶಿವನಗುತ್ತಿ, ಉಪಾಧ್ಯಕ್ಷ ಮಕ್ತುಮಹುಸೇನ ನದಾಫ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅನಗವಾಡಿ ನಭಿ ನದಾಫ, ತಾಲೂಕಾ ಅಧ್ಯಕ್ಷರುಗಳಾದ ಎ.ಎ.ತಿಮ್ಮಾಪೂರ, ಪಿ.ಎಂ. ನದಾಫ, ಎಂ.ಎಚ್. ಪಿಂಜಾರ, ಬಿ.ಎಫ್.ಪಟೇಲ, ಜಿಲ್ಲಾ ಸದಸ್ಯರಾದ ಲಾಲಸಾಬ ನದಾಫ, ತಾಲೂಕಾ ಕಾರ್ಯದರ್ಶಿಗಳಾದ ಸಾಧಿಕ ಕೋಲಾರ ಎಚ್.ಎಂ.ನದಾಫ , ಸಾಹೀರಾಬಾನು ನದಾಫ, ಹುಸೇನಸಾಬ ನದಾಫ ಸೈಪುದ್ದೀನ ನದಾಫ ಸೇರಿದಂತೆ ಜಿಲ್ಲಾ ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು.